

ವಿಜಯಪುರ: ಒಂದೆಡೆ ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಲೆದೋರಿದ್ದರೆ ಇನ್ನೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ಗೊಂದಲದ ಗೂಡಾಗಿ ಪರಿಣಮಿಸಿದೆ !
ಹೌದು, ಶಾಲಾ ಪ್ರಾರಂಭೋತ್ಸವ ನೆರವೇರಿ ತಿಂಗಳು ಸಹ ಗತಿಸಿಲ್ಲ ಆಗಲೇ ಆರಂಭಗೊಂಡಿರುವ ಡಿಡಿಪಿಐ ಕುರ್ಚಿ ಕಿತ್ತಾಟ ಇನ್ನೂ ಸುಖಾಂತ್ಯ ಕಂಡಿಲ್ಲ. ಕೆಲವು ದಿನಗಳ ಹಿಂದೆ ನೂತನವಾಗಿ ನೇಮಕಗೊಂಡಿರುವ ಯುವರಾಜ ನಾಯಕ್ ಸರ್ಕಾರದ ಆದೇಶದಂತೆ ಕಚೇರಿಗೆ ಆಗಮಿಸುತ್ತಿದ್ದಂತೆ ಹಾಲಿ ಡಿಡಿಪಿಐ ಉಮೇಶ ಶಿರಹಟ್ಟಿಮಠ ಜೊತೆ ಕುರ್ಚಿಗಾಗಿ ಕಿತ್ತಾಟ ಆರಂಭಗೊಂಡಿತ್ತು. ಹೀಗಾಗಿ ಡಿಡಿಪಿಐ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಳಿಕ ಉಮೇಶ ಶಿರಹಟ್ಟಿಮಠ ತಮ್ಮ ಅವಧಿ ಜೂ. 30ರವರೆಗೆ ಇದ್ದು ಅಲ್ಲಿಯವರೆಗೆ ಅಧಿಕಾರ ಹಸ್ತಾಂತರಿಸಲು ಸಿದ್ಧರಿಲ್ಲ ಎಂದಿದ್ದರು. ಆದರೆ, ಯುವರಾಜ ನಾಯಕ್ ತಮಗೆ ಸರ್ಕಾರ ಆದೇಶ ನೀಡಿದ್ದು ತ್ವರಿತವಾಗಿ ನೇಮಕಗೊಳ್ಳಬೇಕಿದೆ ಎಂದು ವಾಗ್ವಾದ ಮಂಡಿಸಿದ್ದರು. ಕೊನೆಗೆ ಉಮೇಶ ಶಿರಹಟ್ಟಿ ಮಠ ಮುಂದುವರಿದಿದ್ದರು.
ಡಿಡಿಪಿಐಗಳ ಈ ಕಿತ್ತಾಟ ಗಂಡ ಹೆಂಡಿರ ಮಧ್ಯೆ ಕೂಸು ಬಡವಾಯಿತು ಎಂಬಂತಾಗಿದ್ದು, ಇಬ್ಬರ ಜಗಳದಲ್ಲಿ ಶಿಕ್ಷಣ ಇಲಾಖೆ ನರಳುತ್ತಿದೆ. ಡಿಡಿಪಿಐ ಉಮೇಶ ಶಿರಹಟ್ಟಿಮಠ ಸಂಪರ್ಕಕ್ಕೆ ಸಿಗದಿರುವುದು ಸಾರ್ವಜನಿಕರಿಗೆ ತಲೆನೋವಾಗಿದೆ. ಮೊಬೈಲ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಕಚೇರಿಗೆ ಭೇಟಿ ನೀಡಿದರೆ ಸದಾ ಬೀಗ ಜಡಿದಿರುತ್ತದೆ. ಸಿಬ್ಬಂದಿಯನ್ನು ವಿಚಾರಿಸಿದರೆ ಮೀಟಿಂಗ್‌ಗೆ ತೆರಳದಿದ್ದಾರೆಂದು ಸಬೂಬು ಹೇಳುತ್ತಾರೆ. ಇನ್ನು ‘ಮಾಧ್ಯಮ ಪ್ರತಿನಿಧಿಗಳು’ ಕರೆ ಮಾಡಿದರೆ ಆಗೊಮ್ಮೆ ಈಗೊಮ್ಮೆ ಕರೆ ಸ್ವೀಕರಿಸುತ್ತಾರಾದರೂ ಒಮ್ಮೆ ಕೋರ್ಟ್‌ನಲ್ಲಿ, ಮತ್ತೊಮ್ಮೆ ಮೀಟಿಂಗ್‌ನಲ್ಲಿರುವುದಾಗಿ ಹೇಳುತ್ತಾರೆ. ಮಾಹಿತಿ ಕೇಳಿದರೆ ನುಣುಚಿಕೊಳ್ಳುತ್ತಾರೆ. ಹೀಗಾಗಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಶಾಸಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.