

ದಾಂಡೇಲಿ: ಇಲ್ಲಿನ ಜನತಾ ವಿದ್ಯಾಲಯದ ಒಂದೇ ತರಗತಿಯ 10 ವಿದ್ಯಾರ್ಥಿನಿಯರು ಕೈಗಳಿಗೆ ಗಾಯ ಮಾಡಿಕೊಂಡಿದ್ದ ಪ್ರಕರಣಕ್ಕೆ ತೆರೆ ಎಳೆಯಲಾಗಿದ್ದು, ಈ ಕುರಿತಂತೆ ಯಾವುದೇ ರೀತಿಯ ವದಂತಿಗಳನ್ನು ಹರಡದಂತೆ ಡಿಡಿಪಿಐ ಪಿ. ಬಸವರಾಜ ಕೋರಿದ್ದಾರೆ.
ಬುಧವಾರ ಶಾಲೆಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಅವರು, ಪ್ರಕರಣಕ್ಕೆ ಶಾಲೆ ಶಿಕ್ಷಕರಾಗಲಿ, ಶಾಲಾ ವಾತಾವರಣವಾಗಲಿ ಅಥವಾ ಯಾವುದೇ ಬಾಹ್ಯ ಒತ್ತಡವಾಗಲಿ ಕಾರಣವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಇಂತಹ ಘಟನೆ ಮುಂದೆ ಜರುಗದಂತೆ ಎಚ್ಚರ ವಹಿಸಲು ಶಾಲಾ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ಶಾಲೆಯ 9ನೇ ತರಗತಿಯ ಒಂದು ವಿಭಾಗದ 10 ವಿದ್ಯಾರ್ಥಿನಿಯರು ಕೈಗಳ ಮೇಲೆ ಗಾಯ ಮಾಡಿಕೊಂಡಿರುವ ಘಟನೆ ಸೆ.16ರಂದು ಬೆಳಕಿಗೆ ಬಂದಿತ್ತು. ಈ ಸಂಬಂಧ ನಗರ ಠಾಣೆಯ ಪಿಎಸ್ಐ ಐ.ಆರ್. ಗಡದಡೆಕರ ಮತ್ತು ಮಹಿಳಾ ಸಿಬ್ಬಂದಿ ಶನಿವಾರ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು. ವಿಚಾರಣೆ ವೇಳೆ ಅಮ್ಮ ಬೈದರು, ಗೆಳತಿ ಮಾತು ಬಿಟ್ಟಿದ್ದಳು, ಗೆಳತಿ ಕೈಗೆ ಗಾಯ ಮಾಡಿಕೊಂಡಳೆಂದು ನಾನೂ ಮಾಡಿಕೊಂಡೆ… ಹೀಗೆ ಬೇರೆ ಬೇರೆ ಕ್ಷುಲ್ಲಕ ಕಾರಣ ಹೇಳಿದ್ದರು.