

ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಾಣವಾಗಿರುವ ಮಾದರಿ ಕೂಸಿನ ಮನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೂಸಿನ ಮನೆಗೆ ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಡಿವೈಪಿಸಿ ನಾಗೇಂದ್ರ ಹಸುಗೂಸುಗಳ ನಿರ್ವಹಣೆಗೆ ಮಾಡಿಕೊಂಡಿರುವ ಸಿದ್ಧತೆ ಪರಿಶೀಲಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮಾತನಾಡಿ, ಸುಸಜ್ಜಿತ ಕಟ್ಟಡದಲ್ಲಿ ನಿರ್ಮಿಸಿದ ಮನೆಯಲ್ಲಿ ಗಾಳಿ, ಬೆಳಕು, ನೀರು, ಶೌಚಗೃಹ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳಿಗೆ ಆಟ, ಕಲಿಕಾ ಸಾಮಗ್ರಿಗಳನ್ನು ಕೇಂದ್ರ ಒಳಗೊಂಡಿದೆ. 40 ಮಕ್ಕಳ ಸಾಮರ್ಥ್ಯದ ಈ ಮಾದರಿ ಕೂಸಿನ ಮನೆಯಲ್ಲಿ ತಾಯಿ ಹಾಗೂ ತಂದೆ ಇಬ್ಬರೂ ಕೆಲಸಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಎಳೆ ಮಕ್ಕಳ ಪಾಲನೆ ಹಾಗೂ ಕಲಿಕೆಗೆ ಅಗತ್ಯವಾದ ವಿಧಾನಗಳನ್ನು ಅಳವಡಿಸಲಾಗಿದೆ ಎಂದರು.
ಕೂಸಿನ ಮನೆಗೆ ಪ್ರವೇಶಿಸುವ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ನಡೆದು ಬರಲು ಅನುಕೂಲವಾಗುವಂತೆ ಹಾಗೂ ಚಿಕ್ಕ ಮಕ್ಕಳ ಮನೋಲ್ಲಾಸಕ್ಕೆ ಪೂರಕವಾಗಿ ಆಯಿಲ್ ಪೇಂಟ್‌ನಿಂದ ಚಿತ್ರಗಳನ್ನು ಬಿಡಿಸಲಾಗಿದೆ. ಮನೆಗೆ ಪ್ರವೇಶಿಸಿದ ಮಗುವನ್ನು ಬೊಂಬೆಯ ಮನೆಗೆ ಕರೆದೊಯ್ದು ಆಟ ಆಡಿಸುವುದು, ಕುಳಿತುಕೊಳ್ಳಲು ಚಿಕ್ಕ ಕುರ್ಚಿಗಳು, ನಿದ್ರೆ ಬಂದರೆ ಮಲಗಿಸಲು ತೊಟ್ಟಿಲು, ಸಣಪುಟ್ಟ ಗಾಯಗಳಾದರೆ ಔಷಧ, ಎಲ್ಲ ಮಕ್ಕಳಿಗೂ ಪ್ರತ್ಯೇಕ ಟವೆಲ್ ಹಾಗೂ ಪೌಷ್ಟಿಕ ಆಹಾರ ತಯಾರಿಸಲು ಅಡುಗೆ ಮನೆ, ಆಹಾರ ನೀಡಲು ತಟ್ಟೆಗಳನ್ನು ಸರಬರಾಜು ಮಾಡಿ ಮಾದರಿ ಮನೆ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು ಈ ಕೂಸಿನ ಮನೆಯ ಮಾದರಿಯನ್ನು ಇತರ ಕಡೆಗಳಲ್ಲಿಯೂ ಅಳವಡಿಸುವಂತೆ ಸೂಚಿಸುವುದಾಗಿ ಹೇಳಿದರು.