ಗೊಬ್ಬರ ವಿತರಣೆಯಲ್ಲಿ ರೈತರಿಗೆ ವಂಚನೆ

DODDABELAVANGALA
Published on

ವಿಜಯವಾಣಿ ಸುದ್ದಿ ಜಾಲ ದೊಡ್ಡಬೆಳವಂಗಲ
ಹೋಬಳಿಯ ಎಲ್ಲಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಡುತ್ತಿದ್ದ ಬೆಳೆಗಳು ಮರುಜೀವ ಪಡೆಯುತ್ತಿವೆ. ರಾಗಿ, ಜೋಳದ ಬೆಳೆಗೆ ಬೇಕಾದ ರಸಗೊಬ್ಬರಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ರಸಗೊಬ್ಬರ ಅಂಗಡಿಗಳು, ಡೀಲರ್‌ಶಿಪ್ ಪಡೆದ ಕಂಪನಿಗಳು ರೈತರ ಸುಲಿಗೆಗೆ ಇಳಿದಿವೆ.
ಯೂರಿಯಾ ಗೊಬ್ಬರ ಬೆಲೆ 295 ರೂ. ಇದೆ ಆದರೆ, ಮಧುರೆ ಹೋಬಳಿಯ ಕಾಡುನೂರು ಕೈಮರಾ ಬಳಿ ಇರುವ ಕ್ರಿಯಾಜೀನ್ ಕಂಪನಿಯ ಕಿಸಾನ್ ವರ್ಲ್ಡ್ ಔಟ್ ಲೆಟ್ನ್‌ನಲ್ಲಿ ಒಂದು ಚೀಲ ಯೂರಿಯಾಗೆ 310 ರೂ.ಪಡೆಯಲಾಗುತ್ತಿದೆ. ಸಾಲದೆಂಬಂತೆ ರೈತರು ಕೇಳಿದ ಗೊಬ್ಬರ ಪಡೆಯಬೇಕೆಂದರೆ ಒತ್ತಾಯಪೂರ್ವಕವಾಗಿ ಎನ್‌ಪಿಕೆ(20-20-20) ಖರೀದಿಸಿದರೆ ಮಾತ್ರ ಯೂರಿಯಾ ನೀಡುತ್ತೇವೆ. ಇಲ್ಲವಾದರೆ ಯಾವುದನ್ನೂ ಕೊಡುವುದಿಲ್ಲ ಎಂದು ಹೇಳಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ.
ಸೋಮವಾರ ಬೆಳಗ್ಗೆ 100ಕ್ಕೂ ಹೆಚ್ಚು ರೈತರು ಯೂರಿಯಾ ಖರೀದಿಗೆ ಕ್ರಿಯಾಜೆನ್ ಮಾರಾಟ ಮಳಿಗೆಗೆ ಬಂದಾಗ ಕಂಪನಿ ಸಿಬ್ಬಂದಿಯ ಈ ಉಪಟಳದಿಂದ ರೈತರು ಅಳಲು ತೋಡಿಕೊಂಡಿದ್ದಾರೆ.
ಕಂಪನಿ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಒಬ್ಬ ರೈತರಿಗೆ ಒಂದು ಚೀಲ ಯೂರಿಯಾ ನೀಡುತ್ತೇವೆ. ಎರಡು ಚೀಲ ಯೂರಿಯಾ ಬೇಕಾದರೆ ಎನ್‌ಪಿಕೆ ಖರೀದಿಸಲೇಬೇಕು ಎಂದು ಹೇಳಿದ್ದಾರೆ. ಇದರಿಂದ ಎನ್‌ಪಿಕೆ ಅಗತ್ಯವಿಲ್ಲದ ರೈತರು ಯೂರಿಯಾಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net