

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕಷ್ಣ ಅವರ ಹೆಸರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ 5 ಲಕ್ಷ ರೂ ದತ್ತಿನಿಧಿ ಸ್ಥಾಪಿಸಿದ್ದಾರೆ. ಈ ಹಣದಲ್ಲಿ ಎಸ್‌ಎಂಕೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಹಾಗೂ ಇತರ ಸಾಮಾಜಿಕ ಸೇವೆಗೆ ಬಳಕೆ ಮಾಡಲು ಸಮ್ಮತಿಸಿದ್ದಾರೆ.
ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ಸಚಿವ ಸಿಆರ್‌ಎಸ್ ಆಪ್ತರಾದ ಮಂಡ್ಯ ತಾ.ಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ ಅವರು 5 ಲಕ್ಷ ರೂ.ಗಳ ಮೊತ್ತದ ಡಿಡಿಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಹಸ್ತಾಂತರಿಸಿದರು. ಇದಕ್ಕೆ ಕರ್ನಾಟಕ ಸಂಘದಿಂದ ರಶೀದಿ ಮತ್ತು ಕರಾರು ಪತ್ರ ನೀಡಲಾಯಿತು.
ಜಯಪ್ರಕಾಶಗೌಡ ಮಾತನಾಡಿ, ಸಚಿವರು ನೀಡಿದ ಹಣವನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಎಸ್‌ಎಂಕೆ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು. ಅದರಂತೆ ಎಸ್‌ಎಂಕೆ ಹೆಸರಲ್ಲಿ 1 ಲಕ್ಷ ರೂ ನಗದು ಸಹಿತ ಪ್ರಶಸ್ತಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದಕ್ಕೆ ಈಗ ಸಚಿವ ಚಲುವರಾಯಸ್ವಾಮಿ ಅವರು ನೀಡಿರುವ ದತ್ತಿನಿಧಿ ಹಣವನ್ನು ಬಳಸಿಕೊಳ್ಳಲಾಗುವುದು. ಇದರೊಂದಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಈಗಾಗಲೇ 2 ಲಕ್ಷ ರೂ ನೀಡಿದ್ದಾರೆ. ಒಟ್ಟಾರೆ 10 ರಿಂದ 15 ಲಕ್ಷ ರೂ ಠೇವಣಿಯನ್ನು ದತ್ತಿನಿಧಿಯಾಗಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಠೇವಣಿ ಹಣಕ್ಕೆ ಪ್ರತಿಯಾಗಿ ಕರಾರು ಪತ್ರ ನೀಡಲಾಗುವುದು. ದತ್ತಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳದಂತೆ ಕರಾರು ಪತ್ರದಲ್ಲಿ ನಮೂದಿಸಲಾಗಿದೆ. ಜತೆಗೆ, 3 ವರ್ಷ ನಿರಂತರವಾಗಿ ಎಸ್‌ಎಂಕೆ ಹೆಸರಿನಲ್ಲಿ ಚಟುವಟಿಕೆಗಳನ್ನು ನಡೆಸದಿದ್ದರೆ ದತ್ತಿ ಕೊಟ್ಟವರು ಹಣವನ್ನು ವಾಪಸ್ ಪಡೆಯಬಹುದು ಎಂಬ ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.
ಮಂಡ್ಯದಲ್ಲಿ ಕೃಷಿ ಸಮಗ್ರ ವಿಶ್ವವಿದ್ಯಾನಿಲಯ ಸ್ಥಾಪಿಸುವ ಪ್ರಯತ್ನ ಮತ್ತು ಅದರಲ್ಲಿ ಸಲರಾದ ಸಚಿವ ಚಲುವರಾಯಸ್ವಾಮಿ ಅವರ ಕಾರ್ಯವೈಖರಿ ಶ್ಲಾಘನೀಯ. ಇದಕ್ಕಾಗಿ ಅವರೊಂದಿಗೆ ಕೈಜೋಡಿಸಿದ್ದ ಶಾಸಕ ರವಿಕುಮಾರ್ ಗಣಿಗ ಅವರು ಕೃಷಿ ವಿವಿಯೊಂದಿಗೆ ಮಂಡ್ಯ ವಿಶ್ವವಿದ್ಯಾನಿಲಯನ್ನು ಉಳಿಸಿಕೊಳ್ಳುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರಿಂದಾಗಿಯೇ ಮುಚ್ಚುವ ಹಂತದಲ್ಲಿದ್ದ 8 ವಿವಿಗಳು ಉಳಿದುಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಎಂ.ಕೆ.ಹರೀಶ್‌ಕುಮಾರ್, ಕೋಣನಹಳ್ಳಿ ಜಯರಾಂ, ಹನಕೆರೆ ನಾಗಪ್ಪ ಇತರರಿದ್ದರು.