

ಬೆಂಗಳೂರು: ಐಪಿಎಸ್ ಅಧಿಕಾರಿ ಇಶಾ ಪಂತ್ ವರ್ಗಾವಣೆ ಆದೇಶ ಸಂಗೀತ ಕುರ್ಚಿಯಂತಾಗಿದೆ. ಕೇವಲ ನಾಲ್ಕು ತಾಸಿನಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಹುದ್ದೆಯಿಂದ ವರ್ಗಾವಣೆ ವಿಚಾರವಾಗಿ 3 ಬಾರಿ ಸರ್ಕಾರ ಆದೇಶ ಬದಲಾಯಿಸಿದೆ. ಆಗ್ನೇಯ ವಿಭಾಗದಲ್ಲಿ ಇಶಾ ಪಂತ್ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, 2 ದಿನಗಳ ಹಿಂದೆ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತೆರವಾದ ಸ್ಥಾನಕ್ಕೆ ಜೋಶಿ ಶ್ರೀನಾಥ್ ಮಹದೇವ್ರನ್ನು ಸರ್ಕಾರ ನಿಯೋಜಿಸಿತು.
ಶನಿವಾರ ಬೆಳಗ್ಗೆ 11 ಗಂಟೆಗೆ ಇಶಾ ಪಂತ್ ವರ್ಗಾವಣೆ ಆದೇಶ ದಿಢೀರ್ ಹಿಂಪಡೆದ ಸರ್ಕಾರ, ಮಧ್ಯಾಹ್ನ 12 ಗಂಟೆಗೆ ಆಗ್ನೇಯ ವಿಭಾಗಕ್ಕೆ ಮರು ನಿಯೋಜಿಸಿ ಆದೇಶಿಸಿತು. ನಂತರ 2 ಗಂಟೆಯಲ್ಲೇ ಹಠಾತ್ತಾಗಿ ಸರ್ಕಾರ ಮಟ್ಟದಲ್ಲಿ ಬೆಳವಣಿಗೆಗಳು ನಡೆದು ಮಧ್ಯಾಹ್ನ 3 ಗಂಟೆಗೆ ಮತ್ತೆ ಇಶಾ ಪಂತ್ರನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯ ಕಮಾಡೆಂಟ್ ಸೆಂಟರ್ ಡಿಸಿಪಿ ಹುದ್ದೆಗೆ ವರ್ಗಾಯಿಸಿ ಮತ್ತೊಂದು ಆದೇಶ ಹೊರಡಿಸಿತು. ಇಶಾ ಪಂತ್ ಜಾಗಕ್ಕೆ ಮೊದಲಿನಂತೆ ಜೋಶಿ ಮಹದೇವ್ಗೆ ನಿಯುಕ್ತಿಗೊಂಡಿದ್ದು, ಕಮಾಡೆಂಟ್ ಸೆಂಟರ್ ಡಿಸಿಪಿ ಆಗಿದ್ದ ಜಿನೇಂದ್ರ ಕಣಗಾವಿಗೆ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಹುದ್ದೆಯನ್ನು ಸರ್ಕಾರ ನೀಡಿದೆ.