ಹೆಚ್ಚಿನ ಮಳೆ ಸಾಧ್ಯತೆ; ಅಗತ್ಯ ಮುನ್ನೆಚ್ಚರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ

22MDK05
Published on

ಮಡಿಕೇರಿ:

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಸಂಭವಿಸಬಹುದಾದ ಅನಾಹುತ ತಡೆಯುವ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸುವ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ೩೦೦ ಮಿ.ಮೀ. ಮಳೆ ಕಡಿಮೆ ಇದೆ. ಆದರೂ ಮುಂದಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವ್ಯಾಪಕ ಮಳೆಯಾದಲ್ಲಿ, ಮಳೆಯಿಂದ ಉಂಟಾಗಬಹುದಾದ ಅವಘಡವನ್ನು ತಪ್ಪಿಸಲು ಅಗತ್ಯ ಕಟ್ಟೆಚ್ಚರ ವಹಿಸಬೇಕಿದೆ. ಹೆಚ್ಚಿನ ಮಳೆಯಿಂದ ಉಂಟಾಗಬಹುದಾದ ಪ್ರಾಣ ಹಾನಿ, ಜಾನುವಾರು ಹಾನಿ, ಆಸ್ತಿ-ಪಾಸ್ತಿ ಹಾನಿ ಹೀಗೆ ಪ್ರತಿಯೊಂದರ ಬಗ್ಗೆ ಎಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ತಮ್ಮ ಹಂತದಲ್ಲಿ ತಂಡೋಪಾದಿಯಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು. ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲಿಸಿ ಹೆಚ್ಚಿನ ಮಳೆಯಿಂದ ಪ್ರವಾಹ, ಬರೆ ಕುಸಿತ ಮತ್ತಿತರ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಅಧಿಕಾರಿಗಳು ರಜೆ ಹೋದಲ್ಲಿ ಮುಂಚಿತವಾಗಿ ಮಾಹಿತಿ ನೀಡಿ ಕೇಂದ್ರ ಸ್ಥಾನದಿಂದ ತೆರಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮಾತನಾಡಿ ತಾ.ಪಂ. ಇ.ಒ.ಗಳು ಸೇರಿದಂತೆ ಎಂಜಿನಿಯರ್‌ಗಳು ಚರಂಡಿ, ಸೇತುವೆ ಬಗ್ಗೆ ಕೂಡಲೇ ವರದಿ ನೀಡಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರ ವಹಿಸಬೇಕು. ಗ್ರಾ.ಪಂ.ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಅಂಗನವಾಡಿಗಳು, ಶಾಲೆಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಜಾನುವಾರುಗಳಿಗೆ ಔಷಧಿ ಕಲ್ಪಿಸಬೇಕು. ಈ ಬಾರಿ ಜೂನ್ ತಿಂಗಳಲ್ಲಿ ಕಡಿಮೆ ಮಳೆಯಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಎಚ್ಚರವಹಿಸಬೇಕು. ಜೊತೆಗೆ ನೀರಿನ ಟ್ಯಾಂಕ್ ಶುಚಿಗೊಳಿಸಿ ಸ್ವಚ್ಛತೆಯತ್ತ ಗಮನಹರಿಸಬೇಕು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ವಿವಿಧ ಇಲಾಖೆ ಹಂತದಲ್ಲಿನ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಎಲ್ಲಾ ಹಂತದ ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್ ಜಿಲ್ಲೆಯಲ್ಲಿ ಇದುವರೆಗೆ ೬೦೦ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ಸೆಸ್ಕ್ ಇಇ ಅನಿತಾ ಬಾಯಿ ಅವರು ಜಿಲ್ಲೆಯಲ್ಲಿ ಹಳೇ ವಿದ್ಯುತ್ ಕಂಬಗಳು ಹಾಗೂ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸಲಾಗಿದೆ. ಮುಂಗಾರು ಸಂಬಂಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಸುಂಟಿಕೊಪ್ಪ ಸೇರಿದಂತೆ ಹಲವು ಕಡೆಗಳಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ ಅವರು ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟು ಬಳಿ ಹೂಳು ತೆಗೆಯಲಾಗಿದೆ ಎಂದರು.
ಜಿಲ್ಲಾ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಪ್ರವಾಹ ಉಂಟಾದಲ್ಲಿ ಭಾಗಮಂಡಲ ಸೇರಿದಂತೆ ಅಗತ್ಯ ಇರುವ ಕಡೆ ಬೋಟ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಎನ್‌ಡಿಆರ್‌ಎಫ್ ತಂಡದ ಮುಖ್ಯಸ್ಥ ಶಾಂತಿಲಾಲ್ ಜಾಟಿಯಾ ಸೇರಿ ವಿವಿಧ ಇಲಾಖೆ ಅಧಿಖಾರಿಗಳು ಮುಂಗಾರು ಸಂಬಂಧ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಭೂ ದಾಖಲೆಗಳ ಉಪನಿರ್ದೇಶಕ ಪಿ.ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶ ಪುಟ್ಟರಾಜು, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಾ.ರೂಪೇಶ್ ಗೋಪಾಲ್, ಡಾ.ಸತೀಶ್, ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಎಂ.ಯತ್ನಟ್ಟಿ, ಪೌರಾಯುಕ್ತ ವಿಜಯ್, ಪಿಎಂಜಿಎಸ್‌ವೈ ಎಂಜಿನಿಯರ್ ಪ್ರಭು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ತಹಶೀಲ್ದಾರರಾದ ಎಸ್.ಎನ್.ನರಗುಂದ, ಕಿರಣ್ ಗೌರಯ್ಯ, ಪ್ರಶಾಂತ್, ಪ್ರಕಾಶ್, ತಾ.ಪಂ.ಇಒಗಳಾದ ಅಪ್ಪಣ್ಣ, ಜಯಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net