

ಬೆಂಗಳೂರು/ಆನೇಕಲ್: ತಾಲೂಕಿಗೆ ಶುಕ್ರವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪರಿಶೀಲಿಸಿದರು.
ಈ ರಸ್ತೆ ನಿರ್ಮಾಣವಾದರೆ ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಗ್ಗಿಸಬಹುದಾಗಿದೆ ಆದ್ದರಿಂದ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಗಣಿ ಹಾಗೂ ಬನ್ನೇರುಘಟ್ಟದವರೆಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಕೆಲವು ಕಡೆ ಕಿರಿದಾದ ರಸ್ತೆಗಳಿವೆ. ಹೀಗಾಗಿ ಜರೂರಾಗಿ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಆರ್‌ಡಿಸಿಎಲ್ ವತಿಯಿಂದ ಈ ರಸ್ತೆ ಕಾಮಗಾರಿ ನಡೆಸುತ್ತಿದ್ದು, ಬನ್ನೇರುಘಟ್ಟದಿಂದ ಆನೇಕಲ್‌ವರೆಗೂ 19 ಕೀ.ಮೀ ರಸ್ತೆ ನಿರ್ಮಾಣದ ವೆಚ್ಚ 129 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಲಾಕ್ ಡೌನ್ ವೇಳೆ ಸರ್ಕಾರ 2300 ಕೋಟಿ ರೂ. ವಿಶೇಷ ಪ್ಯಾಕೆಜ್ ಘೋಷಣೆ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿದೆ. ಇಡೀ ದೇಶದಲ್ಲಿ ಯಾವುದೇ ರಾಜ್ಯ ಸರ್ಕಾರಕ್ಕೂ ಇಷ್ಟು ದೊಡ್ಡ ಮೊತ್ತದ ಪ್ಯಾಕೆಜ್ ಘೋಷಣೆ ಮಾಡಿಲ್ಲ ಎಂದು ಹೇಳಿದರು.
ಭೂಮಿ ಸ್ವಾಧೀನ ಸಂಬಂಧ ಕೆಲ ತೊಡಕುಗಳಿದ್ದು ಪರಿಹರಿಸಿಕೊಡುವಂತೆ ಶಾಸಕರಿಗೆ ತಿಳಿಸಲಾಗಿದೆ. ಕರೊನಾ ಭೀತಿಗೆ ಇತರೆ ರಾಜ್ಯ-ಜಿಲ್ಲೆಗೆ ಕಾರ್ಮಿಕರು ತೆರಳಿರುವುದರಿಂದ ಸ್ಥಳೀಯ ಕಾರ್ಮಿಕರ ಮನವೊಲಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಕಾರಜೋಳ ತಿಳಿಸಿದರು.
ಕರೊನಾ ನಿಯಂತ್ರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸೇವೆ ಒದಗಿಸಲು ಸಂಬಂಧಪಟ್ಟ ಮೂರೂ ಇಲಾಖೆಗಳನ್ನು ಕರೆದು ಲಭ್ಯವಿರುವ ಸಂಪನ್ಮೂಲವನ್ನು ಬಳಸಿ ಜನರ ಜೀವನಮಟ್ಟ ಸುಧಾರಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಸಂಸದ ಎ.ನಾರಾಯಣಸ್ವಾಮಿ ಇದ್ದರು.