ಜಮೀನು ಡಿನೋಟಿಫೈ ಮಾಡದಂತೆ ಡಿಸಿಎಂ ತಾಕೀತು: ನಗರಾಭಿವೃದ್ಧಿ ಇಲಾಖೆಯಿಂದ ಬಿಡಿಎಗೆ ಪತ್ರ

bda office
Published on

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜಭವನದ ಮಧ್ಯೆ ತೆರೆಮರೆಯಲ್ಲಿ ರಾಜಕೀಯ ಲೇಪಿತ ಮುಸುಕಿನ ಗುದ್ದಾಟ ನಡೆದಿರುವ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿರುವ ಯಾವುದೇ ಜಮೀನನ್ನು ಡಿನೋಟಿಫಿಕೇಷನ್ ಮಾಡದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದಾರೆ.

ದಶಕದ ಹಿಂದೆ ಭಾರಿ ವಿವಾದ ಹುಟ್ಟುಹಾಕಿದ್ದ ಅರ್ಕಾವತಿ ಬಡಾವಣೆಯ ರೀ ಡು ಪ್ರಕರಣದ ತನಿಖಾ ವರದಿಯ ಸಂಬಂಧ ರಾಜ್ಯಪಾಲರು ಸರ್ಕಾರದಿಂದ ಮಾಹಿತಿ ಕೋರಿರುವಾಗಲೇ, ಡಿಸಿಎಂ ಅವರ ಸೂಚನೆ ಆಧರಿಸಿ ನಗರಾಭಿವೃದ್ಧಿ ಇಲಾಖೆಯು ಬಿಡಿಎಗೆ ಪತ್ರ ಬರೆದಿರುವ ವಿಷಯ ಬಹಿರಂಗವಾಗಿರುವುದು ಕುತೂಹಲ ಕೆರಳಿಸಿದೆ.

ಕಳೆದ ಆ.31ರಂದು ನಗರಾಭಿವೃಧ್ಧಿ ಇಲಾಖೆಯು ಬಿಡಿಎಗೆ ಪತ್ರ ಬರೆದು ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಡಿನೋಟಿೈ ಮಾಡಬಾರದು. ಜತೆಗೆ ಈ ವಿಷಯವಾಗಿ ಪತ್ರ ವ್ಯವಹಾರ ಮಾಡುವ ಮುನ್ನ ತಮ್ಮ ಗಮನಕ್ಕೆ ಕಡ್ಡಾಯವಾಗಿ ತರಲು ಡಿಸಿಎಂ ಸೂಚಿಸಿದ್ದಾರೆಂದು ಬಿಡಿಎಗೆ ರವಾನಿಸಲಾದ ಪತ್ರದಲ್ಲಿ ನಮೂದಿಸಲಾಗಿದೆ. ಜತೆಗೆ ಬದಲಿ ನಿವೇಶನಗಳನ್ನು ನೀಡುವ ಪ್ರಸ್ತಾಪವನೆಗಳು ಇದ್ದಲ್ಲಿ ತಮ್ಮ ಗಮನಕ್ಕೆ ಕಡ್ಡಾಯವಾಗಿ ತಂದು ಕಾನೂನು ರೀತ್ಯ ವ್ಯವಹರಿಸಲು ಸೂಚಿರುವ ಅಂಶ ಒಳಗೊಂಡ ಪತ್ರವು ‘ವಿಜಯವಾಣಿ’ಗೆ ಲಭ್ಯವಾಗಿದೆ.

100ಕ್ಕೂ ಹೆಚ್ಚು ಪ್ರಕರಣ ಬಾಕಿ?:

ರೀ ಡು ಪ್ರಕರಣದ ವಿಷಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಆರೋಪ, ಪ್ರತ್ಯಾರೋಪ ಮುನ್ನೆಲೆಗೆ ಬಂದಿರುವಾಗಲೇ ಡಿಸಿಎಂ ನೀಡಿರುವ ಈ ಸೂಚನೆ ಮಹತ್ವ ಪಡೆದುಕೊಂಡಿದೆ. ಸದ್ಯ ಬಿಡಿಎನಲ್ಲಿ ಡಿನೋಟಿೈ ಮಾಡುವ ಪ್ರಸ್ತಾವನೆಗಳು ಇಲ್ಲದಿದ್ದರೂ, ಬದಲಿ ಸೈಟ್‌ಗಳನ್ನು ಮಂಜೂರು ಮಾಡುವ ಹಲವು ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಪ್ರಾಧಿಕಾರವು ತನ್ನ ಯೋಜನೆಯ ಕಾಮಗಾರಿಗಳಿಗಾಗಿ ವಶಪಡಿಸಿಕೊಂಡಿರುವ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭೂಮಾಲೀಕರು (ರೈತರು ಒಳಗೊಂಡಂತೆ) ಹಾಗೂ ಸೈಟ್‌ದಾರರಿಗೆ ಪರಿಹಾರದ ರೂಪದಲ್ಲಿ ಬದಲಿ ನಿವೇಶನಗಳನ್ನು ನೀಡಬೇಕಿದೆ. ಇದಕ್ಕಾಗಿ ರೈತರು ಹಲವು ವರ್ಷಗಳಿಂದ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದರೂ, ಇಲ್ಲದ ನೆಪವೊಡ್ಡಿ ಮಂಜೂರಾತಿಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆಕ್ಷೇಪ ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ.

ಕೋರ್ಟ್ ಆದೇಶಗಳಿಗೆ ಅನ್ವಯವಾಗುವುದೇ?:

ಬಿಡಿಎನಲ್ಲಿ ಸಾರ್ವಜನಿಕರಿಗೆ ವಿವಿಧ ರೂಪದಲ್ಲಿ ನಾಗರಿಕ ಸೈಟ್‌ಗಳನ್ನು ಹಂಚಿಕೆ ಮಾಡುವ ಪದ್ಧತಿ ಇದೆ. ಇವುಗಳಲ್ಲಿ ಸ್ವತಃ ಪ್ರಾಧಿಕಾರವು ತನ್ನ ತಪ್ಪಿನಿಂದ ಸೈಟ್ ವಿಸ್ತೀರ್ಣದಲ್ಲಿ ದೋಷ, ಅನ್ಯ ಬಡಾವಣೆಯಲ್ಲಿ ಸೈಟ್ ಮಂಜೂರಾತಿ, ಸ್ವಾಧೀನ ಅಧಿಸೂಚನೆ ಮಾಡಿಕೊಳ್ಳದೆ ರೈತರ ಜಮೀನು ಬಳಕೆ ಪ್ರಕರಣಗಳಲ್ಲಿ ಬದಲಿ ನಿವೇಶನಗಳನ್ನು ವಿತರಿಸಬೇಕಾಗುತ್ತದೆ. ಅದರಲ್ಲೂ ಕೋರ್ಟ್ ಮೊರೆ ಹೋದ ಪ್ರಕರಣಗಳಲ್ಲಿ ಇಂತಿಷ್ಟು ಕಾಲಮಿತಿಯೊಳಗೆ ಬದಲಿ ಸೈಟ್ ಹಂಚಿಕೆ ಮಾಡುವಂತೆ ನ್ಯಾಯಾಲಯ ಬಿಡಿಎಗೆ ತಾಕೀತು ಮಾಡಿರುವ ಹಲವು ಉದಾಹರಣೆಗಳು ಇವೆ. ಇಂತಹ ಪ್ರಕರಣಗಳಿಗೆ ನಗರಾಭಿವೃದ್ಧಿ ಇಲಾಖೆ ಬಿಡಿಎಗೆ ರವಾನಿಸಿರುವ ಪತ್ರದನ್ವಯ ಬದಲಿ ಸೈಟ್ ಹಂಚಿಕೆ ಮಾಡಬೇಕೇ ಅಥವಾ ಡಿಸಿಎಂ ಸೂಚನೆಯಂತೆ ಮಂಜೂರಾತಿಯನ್ನು ತಡೆಹಿಡಿಯಬೇಕೆ ಎಂಬ ಜಿಜ್ಞಾಸೆ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net