ಬಿಬಿಎಂಪಿ ವಾರ್‌ರೂಂಗೆ ಡಿಸಿಎಂ ಭೇಟಿ: ತಗ್ಗು ಪ್ರದೇಶದ ಜನರ ಬಗ್ಗೆ ಎಚ್ಚರ ವಹಿಸಸಲು ಸೂಚನೆ

dcm visit
Published on

ಬೆಂಗಳೂರು: ಮಹಾನಗರದಲ್ಲಿ ಉಂಟಾಗುವ ಮಳೆ ಅನಾಹುತದ ಬಗ್ಗೆ ಖುದ್ದು ಪರಿಶೀಲನೆ ನಡೆಸಲು ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸೋಮವಾರ ತಡರಾತ್ರಿ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಂಗೆ ದಿಢೀರ್ ಭೇಟಿ ನೀಡಿ ಅವಲೋಕನ ನಡೆಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಅನಾಹುತದಿಂದ ಉಂಟಾದ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ವಿಪತ್ತು ನಿರ್ವಹಣೆಯನ್ನು ಹೇಗೆ ನಿಭಾಯಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ಅಧಿಕಾರಿಗಳಿಂದ ಪಡೆದು ಅವರಿಗೆ ಅಗತ್ಯ ಮಾರ್ಗದರ್ಶನ ನೀಡಿ, ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮಳೆಯಿಂದ ಸಮಸ್ಯೆಯಾಗದಂತೆ ತೀವ್ರ ನಿಗಾ ವಹಿಸಿ ಅಲ್ಲಿನ ನಿವಾಸಿಗಳೊಂದಿಗೆ ಸತತ ಸಂಪರ್ಕದಲ್ಲಿರುವಂತೆ ಸೂಚಿಸಿದರು.

ಈ ವೇಳೆ ಮಾತನಾಡಿದ ಡಿಸಿಎಂ, ನಗರದ ಹಲವು ಭಾಗಗಳಲ್ಲಿ ನಿರಂತರವಾಗಿ 2-3 ಗಂಟೆ ಮಳೆ ಸುರಿದ ಪರಿಣಾಮ ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಾಗಿದೆ. ಕೆಲೆವೆಡೆ ಸಂಚಾರ ಸಮಸ್ಯೆಯೂ ಉಂಟಾಗಿದೆ. ಈ ವಿಚಾರವಾಗಿ ವಾರ್‌ರೂಂಗೆ ಭೇಟಿ ನೀಡಿ ವಾಸ್ತವವನ್ನು ಪರಿಶೀಲನೆ ಮಾಡಿರುವೆ.

ಪಾಲಿಕೆ ವಲಯ ಆಯುಕ್ತರು, ಜಂಟಿ ಆಯುಕ್ತರು ಸಮಸ್ಯಾತ್ಮಕ ಸ್ಥಳಗಳಿಗೆ ಭೇಟಿ ನೀಡಲು ಸೂಚಿಸಿರುವೆ. ರಾಜಕಾಲುವೆಗಳಲ್ಲಿ ಎಷ್ಟು ಪ್ರಮಾಣದ ನೀರು ಹರಿದು ಹೋಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ತಗ್ಗು ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಲು ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ ಎಂದರು.

ಪಾಲಿಕೆ ಆಧಿಕಾರಿಗಳಿಗೆ ಡಿಸಿಎಂ ನೀಡಿರುವ ಸೂಚನೆ:

* ಸಂಭವನೀಯ ಅನಾಹುತ ತಪ್ಪಿಸಲು ಅಧಿಕಾರಿಗಳು, ಇಂಜಿನಿಯರ್‌ಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು.

* ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು.

* ಮಳೆಯಾಗುವ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು.

* ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು.

* * ಸಹಾಯವಾಣಿ ಕೇಂದ್ರದಲ್ಲಿ ಸಂಬಂಧಿಸಿದ ಅಧಿಕಾರಿಗಳು ಜಾಗರೂಕರಾಗಿರಬೇಕು.

* ಕಾಲುವೆಗಳಲ್ಲಿ, ಸರಾಗವಾಗಿ ನೀರು ಹರಿದು ಹೋಗುವಂತೆ ಇರುವ ಅಡಚಣೆ ನಿವಾರಿಸಬೇಕು.

* ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡಿ, ರಸ್ತೆ/ಅಂಡರ್‌ಪಾಸ್‌ಗಳಲ್ಲಿ ನಿಂತಿರುವ ನೀರನ್ನು ತೆರವುಗೊಳ್ಳಬೇಕು.

* ಬೇಜವಾಬ್ದಾರಿ ತೋರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ನಿಶ್ಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net