ಪಕ್ಷದ ಕಚೇರಿಗೆ ಕೆಪಿಸಿಸಿ ಹೆಸರಿನಲ್ಲಿ ಆರ್ ಟಿ ಸಿ ಕಡ್ಡಾಯ

IMG-20250302-WA0028
Published on

ಉಡುಪಿ: ರಾಜ್ಯದಲ್ಲಿ ನೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಕಾಂಗ್ರೆಸ್ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ರಾಹುಲ್ ಗಾಂಧಿಯವರು ವಚ್ಯುರ್ವಲ್ ಆಗಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬೆಂಗಳೂರಿನಲ್ಲಿ 3 ಹೊಸ ಕಚೇರಿ ಪ್ರಾರಂಭವಾಗಲಿದೆ. ಹೊಸ ಕಚೇರಿಯ ಜಾಗ ಕೆಪಿಸಿಸಿಯ ಹೆಸರಲ್ಲೇ ನೊಂದಣಿ ಆಗಿರುವುದು ಕಡ್ಡಾಯ. ವೈಯಕ್ತಿಕ ಹೆಸರಿನಲ್ಲಿರುವ ಜಾಗದಲ್ಲಿ ಕಚೇರಿ ಪ್ರಾರಂಭಿಸಲು ಅವಕಾಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ರಾಜಕಾರಣ ಮಾಡುವುದನ್ನು ಬಿಟ್ಟು, ಪಕ್ಷವನ್ನು ಬಲಪಡಿಸಬೇಕು. ಮುಂದಿನ ಮೂರು ತಿಂಗಳಲ್ಲಿ ನಾಯಕರು ಪಕ್ಷ ಸಂಘಟನೆ ಮಾಡಬೇಕು, ಇಲ್ಲವಾದರೆ ಎಲ್ಲವನ್ನು ಬದಲಾವಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯೂಥ್ ಕಾಂಗ್ರೆಸ್ ಎಲೆಕ್ಷನ್ ಆಗಿದ್ದು, ಹಲವು ಜನ ಗೆದ್ದಿದ್ದಾರೆ. ಗೆದ್ದವರು, ಸೋತವರನ್ನು ವಿಶ್ವಾಸಕ್ಕೆ ಪಡೆದು ಒಟ್ಟಿಗೆ ಪಕ್ಷದ ಕಾರ್ಯ ನಿರ್ವಹಿಸಬೇಕು. ಪಕ್ಷದೊಳಗೆ ಗುಂಪುಗಾರಿಕೆ ಮಾಡಬೇಡಿ. ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡುವುದನ್ನು ಬಿಟ್ಟು, ಪಕ್ಷ ಪೂಜೆ ಮಾಡಿ ಎಂದರು.

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಬೇಕು. 6 ಸಚಿವರ ನೇತೃತ್ವದಲ್ಲಿ ಒಂದು ಕೋರ್ ಟೀಮ್ ರಚನೆ ಮಾಡಲಾಗಿದೆ. ಈ ಮೂಲಕ ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ದಕ್ಷಿಣ-ಕನ್ನಡ & ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 9 ಸೀಟ್ ಗೆಲ್ಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚಿಕ್ಕಮಗಳೂರಿನಲ್ಲಿ 5 ಕ್ಕೆ 5, ಉ.ಕ, ಕೊಡಗಿನಲ್ಲೂ ಗೆದ್ದಿದ್ದೇವೆ. ಆದರೆ ಉಡುಪಿ ಹಾಗು ದ.ಕ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಬಂದಿಲ್ಲ. ಜಿಲ್ಲೆಯಲ್ಲಿ 5 ಶಾಸಕ ಸ್ಥಾನ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಗಮನಹರಿಸಬೇಕು. ಇತ್ತೀಚಿನ ಸರ್ವೇ ಪ್ರಕಾರ ಈ ಹಿಂದೆ ಸೋತ 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ.

ಬ್ರಾಹ್ಮಣರು ನನಗೆ ಮತ ಹಾಕ್ತಾರ

ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ನನ್ನ ಕ್ಷೇತ್ರದಲ್ಲಿ ಶೇ. 99ರಷ್ಟು ಬ್ರಾಹ್ಮಣರು ನನಗೆ ಮತ ಹಾಕುತ್ತಾರೆ. ನಿಮಗೆ ಯಾಕೆ ಮತ ಹಾಕುವುದಿಲ್ಲ. ಬ್ರಾಹ್ಮಣರು ಬಿಜೆಪಿ ಮಾತ್ರ ಮತ ಹಾಕುತ್ತಾರೆ ಎಂಬ ಭ್ರಮೆ ಬೇಡ. ಲಿಂಗಾಯಿತರೂ ಪಕ್ಷಕ್ಕೆ ಮತ ನೀಡುತ್ತಾರೆ ಎಂದರು.

ಸಭೆಯಲ್ಲಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವಾನ್ ಡಿಸೋಜಾ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net