

ಹುಬ್ಬಳ್ಳಿ : ಧರ್ಮ, ಸತ್ಯ ಮತ್ತು ಅಹಿಂಸೆಯನ್ನೇ ತನ್ನ ಪರಮ ಧ್ಯೇಯವನ್ನಾಗಿ ಮಾಡಿಕೊಂಡಿರುವ ಜೈನ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಿ, ಮುಂಬರುವ ಬಜೆಟ್ನಲ್ಲಿ ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ.
ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಂಗಳವಾರದಂದು ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರ ಪ್ರೇರಣೆಯಿಂದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಿದ್ದು ಈಗ ಇತಿಹಾಸ. ಅದನ್ನು ಯಾರೂ ಅಲ್ಲಗಳೆಯಲಾರರು ಎಂದರು.
ತಾವು ಮುಖ್ಯಮಂತ್ರಿ ಆಗಲೆಂದು ಹಿರಿಯ ಆಚಾರ್ಯರು ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ತಾವು ಕೃತಜ್ಞರಾಗಿರುವುದಾಗಿ ಹೇಳಿದ ಡಿಕೆಶಿ, ಆದರೂ ಒಳ ಏಟುಗಳು ಹೊಡಿಯುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿ ಅದರ ಚರ್ಚೆ ಬೇಡ ಎಂದು ಆ ವಿಷಯದ ಚರ್ಚೆಗೆ ಹೋಗದೇ ವಿರಾಮ ನೀಡಿದರು.
ಧರ್ಮ ಯಾವುದಾದರೂ ತತ್ವ ಒಂದೇಯಾಗಿದೆ. ಯಾವ ಧರ್ಮದಲ್ಲಿಯೂ ಯಾರಿಗೂ ಹಿಂಸೆ ನೀಡಬಾರದು ಎಂಬ ಸಂದೇಶ ಇದೆ. ಕಠಿಣ ಧರ್ಮ, ತ್ಯಾಗ ಮನೋಭಾವ, ಶಿಸ್ತು ಜೈನ ಧರ್ಮದಲ್ಲಿ ಇದೆ. ಅಹಿಂಸೆ, ಸತ್ಯ ಹಾಗೂ ತ್ಯಾಗಕ್ಕೆ ಜೈನ ಧರ್ಮ ಮಾದರಿಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವರೂರ ಕ್ಷೇತ್ರದಲ್ಲಿ ಗುಣಧರನಂದಿ ಮಹರಾಜರು ದೇಶಕ್ಕೆ ಮಾದರಿಯಾದ ಸಮಾರಂಭ ಮಾಡಿದ್ದಾರೆ. ಜೈನ ಧರ್ಮದ ನಿಗಮ ಮಂಡಳಿ ಸ್ಥಾಪಿಸಲು ಸರ್ಕಾರಕ್ಕೆ ನಾನು ಸಹ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಮಹಾಮಸ್ತಕಾಭಿಷೇಕ ಮಹೋತ್ಸವ ಮಹಾಮಂತ್ರಿ ಮಹೇಂದ್ರ ಸಿಂಘಿ ಸ್ವಾಗತಿಸಿ, ವರೂರು ಅಭಿವೃದ್ಧಿ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸರ್ಕಾರದಿಂದ 200 ಕೋಟಿ ರೂ. ಸಹಾಯಧನ ಕೊಡಿಸುವಂತೆ ಮನವಿ ಮಾಡಿದರು. ಕುಮುದಾ ನಾಗಭೂಷಣ ನಿರೂಪಿಸಿ, ವಂದಿಸಿದರು.
ಡಿ ಕೆ. ಶಿವಕುಮಾರ ಸಿಎಂ ಆಗಲಿ: ಜೈನ ನಿಗಮ ಮಂಡಳಿ ಹಾಗೂ ಡಿ.ಕೆ. ಶಿವಕುಮಾರ ಅವರು ಸಿಎಂ ಆಗಬೇಕು ಎಂಬುವುದು ನಮ್ಮ ಅಪೇಕ್ಷೆ ಇದೆ. ಇಲ್ಲಿ ನವಗ್ರಹಗಳ ಅನುಷ್ಠಾನ ವಾಗಿದ್ದು, 18 ಆಚಾರ್ಯರು ಡಿ.ಕೆ. ಶಿವಕುಮಾರ ಸಿಎಂ ಆಗಲಿ ಎಂದು ಆಶೀರ್ವದಿಸಲಿ. ಎಷೊ್ಟೕ ಕಾಟ, ಸಂಕಷ್ಟ ಇದ್ದರೂ ಸಹ ಅವರು ಮುಖ್ಯಮಂತ್ರಿ ಆಗಿಯೇ ತಿರುತ್ತಾರೆ. ಜೈನ ನಿಗಮ ಮಂಡಳಿ ಸ್ಥಾಪನೆ ಸಮಾಜಕ್ಕಾಗಿ. ಜೈನ ಮುನಿಗಳು ಯಾವತ್ತಿಗೂ ಇಂತಹ ಬೇಡಿಕೆ ಸರ್ಕಾರದ ಮುಂದೆ ಇಟ್ಟಿಲ್ಲ. ಮೊದಲ ಬಾರಿಗೆ ಕೇಳಿದ್ದರಿಂದ ಮಂಡಳಿ ಸ್ಥಾಪಿಸಬೇಕು ಎಂದು ರಾಷ್ಟ್ರ ಸಂತ ಆಚಾರ್ಯ ಶ್ರೀ ಗುಣಧರನಂದಿ ಮಹರಾಜರು ತಿಳಿಸಿದರು.
ಮಹಾಮಸ್ತಕಾಭಿಷೇಕ ಆರಂಭ : ಭಗವಾನ್ ಪಾರ್ಶ್ವನಾಥ ಹಾಗೂ ನವಗ್ರಹ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಮಂಗಳವಾರದಂದು ಜಲಾಭಿಷೇಕದಿಂದ ಆರಂಭಗೊಂಡಿತು. ಕ್ಷೇತ್ರದಲ್ಲಿರುವ ಬೃಹತ್ ಪಾರ್ಶ್ವನಾಥ ಪ್ರತಿಮೆಗೆ ಹಾಲು, ಹಳದಿ, ಕುಂಕುಮ ಮಿಶ್ರಿತ ಜಲ ಮತ್ತು ಪುಷ್ಪಗಳಿಂದ ಅಭಿಷೇಕ ನೆರವೇರಿತು.
ಆಚಾರ್ಯ ಗುರುದೇವ ಶ್ರೀ ಕುಂಥುುಸಾಗರ ಮಹಾರಾಜರು ಆಶೀರ್ವಾದ ನೀಡಿದರು. ವಿನಯ ಗುರೂಜಿ ಹಾಗೂ ವನಿತಾ ಸುರೇಂದ್ರಕುಮಾರ ಮಾತನಾಡಿದರು. ಸಚಿವ ಡಿ.ಸುಧಾಕರ, ಶಾಸಕ ಎನ್.ಎಚ್. ಕೋನರೆಡ್ಡಿ, ಸುರೇಂದ್ರಕುಮಾರ ಹೆಗ್ಗಡೆ, ಎಸ್ಡಿಎಂ ವಿವಿ ಉಪಕುಲಪತಿ ನಿರಂಜನ ಕುಮಾರ, ತವನಪ್ಪ ಅಷ್ಟಗಿ ಉಪಸ್ಥಿತರಿದ್ದರು.