

ಮಂಡ್ಯ: ಕಾವೇರಿ ನದಿಗೆ ಕೊಳಚೆ ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸುವುದರ ಜತೆಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
ಸಮಸ್ಯೆ ಕುರಿತು ಮಾಲಿನ್ಯ ತಡೆಗೆ ಕ್ರಮಕೈಗೊಳ್ಳಬೇಕೆಂಬ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಮನವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸ್ಪಂದಿಸಿದ್ದಾರೆ. ಅದರಂತೆ ನದಿ ನೀರು ಮಲೀನಗೊಳ್ಳದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದ್ದಾರೆ. ಇನ್ನು ಸಮಿತಿ ರಚಿಸಿ ಎರಡು ವಾರದಲ್ಲಿ ವಿಸ್ತೃತ ವರದಿ ನೀಡುವಂತೆ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.
ಕಾವೇರಿ ನದಿಗೆ ತ್ಯಾಜ್ಯ ಮಿಶ್ರಿತ ನೀರು ಪೂರೈಕೆ ಆಗುತ್ತಿರುವುದಕ್ಕೆ ಹಾಗೂ ಈ ಸಂಬಂಧ ತನಿಖಾ ತಂಡ ರಚನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿನೇಶ್‌ಗೂಳಿಗೌಡ ಮನವಿ ಮಾಡಿದ್ದರು. ಈ ಮನವಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸುವ ಮೂಲಕ ಮಾಲಿನ್ಯಗೊಳ್ಳುತ್ತಿರುವ ಕಾವೇರಿ ನದಿಯ ಶುದ್ಧೀಕರಣಕ್ಕೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನದಿಗಳ ಮಾಲಿನ್ಯದ ಬಗ್ಗೆ 2023ರಲ್ಲಿ ವರದಿ ನೀಡಿದ್ದು, ಅದರಲ್ಲಿ ಕಾವೇರಿ ನದಿಯ ನೀರೂ ಕಲುಷಿತವಾದ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ದಿನೇಶ ಗೂಳಿಗೌಡ ಸಚಿವರಿಗೆ ಪತ್ರ ಬರೆದಿದ್ದರು. ಮಾತ್ರವಲ್ಲದೆ ಕಾವೇರಿ ಕರ್ನಾಟಕದ ಜೀವ ನದಿಯಾಗಿದೆ. ಕುಡಿಯುವ ನೀರು ಪೂರೈಸುವುದು ಮಾತ್ರವಲ್ಲದೇ, ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹಸನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯ ಮಾಡಿದ್ದರು.
ಮನವಿಯಲ್ಲೇನಿತ್ತು?: ಕಾವೇರಿ ನದಿಯಿಂದ ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗಾಗಿ 19 ಟಿಎಂಸಿ ನೀರನ್ನು ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ 1,440 ಎಂಎಲ್‌ಡಿಯಷ್ಟು ನೀರನ್ನು ನಗರಕ್ಕೆ ಪೂರೈಸುತ್ತಿದೆ.
ಬೆಂಗಳೂರು ನಗರ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಿರುವ ಕಾವೇರಿ ನದಿ ನೀರು ಇಂದು ಹಾಲಾಹಲವಾಗಿ ಮಾರ್ಪಡುತ್ತಿದೆ. ಒಳಚರಂಡಿ ನೀರು ಹಾಗೂ ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ನದಿಯು ನೈಸರ್ಗಿಕ ಗುಣ ಕಳೆದುಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ಹರಿಯುವ ಮಾರ್ಗದ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ನಂಜನಗೂಡು, ತೀ.ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಮುಖ ನಗರ-ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳು ತಲೆಎತ್ತಿದ್ದು, ಅದರ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಯ ಬೀಡುತ್ತಿರುವುದರಿಂದ ನೀರು ಸಂಪೂರ್ಣ ಕಲುಷಿತಗೊಂಡು ಮಲಿನಗೊಳ್ಳುತ್ತಿದೆ. ಕೈಗಾರಿಕಾ ಪ್ರದೇಶದಿಂದ ಶುದ್ದೀಕರಿಸದ ತ್ಯಾಜ್ಯ ನೀರು ನದಿ ಸೇರುತ್ತಿದ್ದು ಕೆಮಿಕಲ್ ಮಿಶ್ರಿತ ನೀರಿನಿಂದ ನೊರೆ ಸೃಷ್ಟಿಯಾಗಿ, ಜಲಚರಗಳಿಗೆ ಮಾರಣಾಂತಿಕವಾಗುತ್ತಿದೆ.
ಸಿಪಿಸಿಬಿ ವರದಿ ಪ್ರಕಾರ, ಶುದ್ಧ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಎಂಜಿಗಿಂತ ಕಡಿಮೆ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಕಾವೇರಿ ನದಿಯಲ್ಲಿ 6 ಎಂಜಿಯಷ್ಟಿದೆ ಎಂಬುದನ್ನು ತಿಳಿಸಿದೆ. ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆ ತ್ಯಾಜ್ಯ, ಘನ ತ್ಯಾಜ್ಯ ಅಪಾಯದ ಪ್ರಮಾಣ ಮೀರಿ ನದಿ ನೀರಿಗೆ ಸೇರ್ಪಡೆಯಾಗುತ್ತಿರುವುದರಿಂದ ಇದರ ತಡೆಗೆ ಸರ್ಕಾರ ಕ್ರಮವಹಿಸಬೇಕಿದೆ. ಇದಕ್ಕಾಗಿಯೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡುವುದರಿಂದ ಕೈಗಾರಿಕಾ ಪ್ರದೇಶ, ಯುಜಿಡಿ ಮಿಕ್ಸಿಂಗ್ ಲಿಂಕ್, ಹೋಟೆಲ್ ಹಾಗೂ ರೆಸಾರ್ಟ್ ಸೇರಿದಂತೆ ಇತರ ಪ್ರದೇಶಗಳಿಂದ ಬರುವ ಮಲಿನ ನೀರು ಪವಿತ್ರ ಕಾವೇರಿ ನದಿ ಒಡಲು ಸೇರದಂತೆ ನಿಗಾವಹಿಸಬಹುದಾಗಿದೆ.
ಇದರಿಂದ ಸರ್ಕಾರ ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಲಿದೆ. ನದಿ ನೀರು ಸ್ವಚ್ಛವಾಗಿ ಜಲಚರಗಳು, ನದಿ ನೀರು ಅವಲಂಬಿತ ಪ್ರದೇಶಗಳ ಜನರ ಆರೋಗ್ಯ ಕೂಡ ಸುಧಾರಿಸಲಿದೆ ಎಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.
ಕಾವೇರಿ ನೀರಿಗೆ ತ್ಯಾಜ್ಯ ಸೇರುತ್ತಿರುವ ಬಗ್ಗೆ ಗಮನಹರಿಸುವಂತೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಡಿಸಿಎಂ ಸೇರಿದಂತೆ ಸಚಿವರಿಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಸ್ಪಂದನೆ ಸಿಕ್ಕಿದ್ದು, ತುರ್ತು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ ತ್ಯಾಜ್ಯ ಸೇರುತ್ತಿರುವ ಬಗ್ಗೆ ತನಿಖೆಗೆ ಡಿಸಿಎಂ ಆದೇಶಿಸಿದ್ದಾರೆ.ದಿನೇಶ್ ಗೂಳಿಗೌಡವಿಧಾನ ಪರಿಷತ್ ಸದಸ್ಯ