

ಬೆಂಗಳೂರು: ಬೆಂಗಳೂರು ನಗರದ ಕೆರೆಗಳ ಒತ್ತುವರಿ ಹಾಗೂ ಕೆರೆ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲು ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ ಹಾಗೂ ಗೋಪಿನಾಥ್ ನೇತೃತ್ವದಲ್ಲಿ ಪ್ರತ್ಯೇಕ ಮೂರು ಸಮಿತಿ ರಚಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಬನಶಂಕರಿಯಲ್ಲಿರುವ ಬೆಂಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಉದ್ದೇಶಿತ ಸಮಿತಿಯು ನಗರದೆಲ್ಲೆಡೆ ಇರುವ ಕೆರೆಗಳ ಒತ್ತುವರಿ, ಜಲತಾಣಗಳಿಗೆ ಕೊಳಚೆ ನೀರು ಸೇರುತ್ತಿರುವುದು ಸೇರಿ ಇತರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ. ಕೆರೆಗಳಿಗೆ ಕೊಳಚೆ ನೀರು ಬಿಡುತ್ತಿರುವವರು ಯಾರೇ ಆಗಿರಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೆರೆಗಳನ್ನು ಈಗಲೇ ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಕಷ್ಟವಾಗಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸಿಎಸ್‌ಆರ್ ನಿಧಿಗೆ ಉದ್ಯಮಿಗಳ ಸಭೆ:
ಶೈಕ್ಷಣಿಕ ಕ್ಷೇತ್ರಕ್ಕೆ ಸಿಎಸ್‌ಆರ್ ನಿಧಿ ತರುವ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಇಬ್ಬರೂ ಸೇರಿಕೊಂಡು ಉದ್ಯಮಿಗಳ ಸಭೆ ಕರೆದು ಚರ್ಚಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ನಿಗಾ ವಹಿಸಬೇಕು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿಎಂ ಸಲಹೆ ನೀಡಿದರು.
ಬಾಲ್ಯವಿವಾಹದ ಬಗ್ಗೆ ಮಾಹಿತಿ ಇದೆಯೇ?:
ಬಾಲ್ಯ ವಿವಾಹ ತಡೆಯಬೇಕು ಅಂಥ ಪ್ರತಿಜ್ಞೆ ಸ್ವೀಕಾರ ಮಾಡಿದ್ದೇವೆ. ಆದರೆ, ಬೆಂಗಳೂರು ನಗರದಲ್ಲಿ ಎಷ್ಟೆಷ್ಟು ಬಾಲ್ಯ ವಿವಾಹ ನಡೆದಿದೆ ಅಂತ ನಿಮ್ಮ ಬಳಿ ಮಾಹಿತಿ ಇದೆಯಾ? ಪೊಲೀಸರು ಎಷ್ಟು ಕೇಸ್ ದಾಖಲು ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ. ಈ ವಿಚಾರವನ್ನು ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಲಾಯಿತು.
ಕೆಡಿಪಿ ಸಭೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್, ಎಂ.ಕೃಷ್ಣಪ್ಪ, ಬಿ.ಶಿವಣ್ಣ, ಮೇಲ್ಮನೆ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ, ಗೋಪಿನಾಥ್, ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಇತರ ಹಿರಿಯ ಅಧಿಕಾರಿಗಳಿದ್ದರು.
ಆಸಕ್ತಿ ಇದ್ದರೆ ನನ್ನ ಜೊತೆ ಕೆಲಸ ಮಾಡಿ:
ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಯಾವ ಅಧಿಕಾರಿ ಏನೇನೂ ಮಾಡುತ್ತಿದ್ದಾರೆ ಅನ್ನೋ ಪೂರ್ಣ ಮಾಹಿತಿ ನನ್ನ ಬಳಿ ಇದೆ. ನನಗೇನೂ ಗೊತ್ತಾಗುತ್ತಿಲ್ಲ ಎಂಬ ಭ್ರಮೆ ಬೇಡ. ಆತ್ಮ ಸ್ಥೈರ್ಯ ಕುಂದಿಸಬಾರದೆಂದು ನಿಮ್ಮ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ. ನನ್ನ ಜತೆ ಕೆಲಸ ಮಾಡಲು ಆಸಕ್ತಿ ಇದ್ದರೆ ಹುದ್ದೆಯಲ್ಲಿ ಮುಂದುವರಿಯಬಹುದು, ಇಲ್ಲದಿದ್ದರೆ ಬೇರೆ ಕಡೆಗೆ ಹೊರಡಬಹುದು ಎಂದು ಡಿಸಿಎಂ ಖಡಕ್ ಎಚ್ಚರಿಕೆ ನೀಡಿದರು.
ಮಾದಕವಸ್ತುಮುಕ್ತ ಬೆಂಗಳೂರು:
ನಗರದ ಪ್ರತಿಯೊಂದು ಶಾಲಾ, ಕಾಲೇಜುಗಳ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಸಭೆ ಕರೆದು ಮಾದಕವಸ್ತು ನಿಯಂತ್ರಣದ ಬಗ್ಗೆ ತಿಳಿಸಬೇಕು. ಜತೆಗೆ ಶಾಲಾ-ಕಾಲೇಜುಗಳ ಬಳಿ ಅಂಗಡಿಗಳಲ್ಲಿ ಅಥವಾ ಇತರೆಡೆ ಮಾದಕವಸ್ತು ರವಾನೆ ಬಗ್ಗೆ ಅನುಮಾನ ಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಡಿಸಿಎಂ ನಿರ್ದೇಶಿಸಿದರು.