

ಬೆಂಗಳೂರು: ಬಿಬಿಎಂಪಿಯು ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಲು ಎರಡು ಸಂಚಾರಿ ಪ್ರಯೋಗಾಲಯ ವಾಹನಗಳನ್ನು ಖರೀದಿಸಿದ್ದು, ಗುರುವಾರ ಬಳಕೆಗೆ ಚಾಲನೆ ನೀಡಲಾಯಿತು.
ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಈ ನೂತನ ವಾಹನಗಳನ್ನು ವೀಕ್ಷಣೆ ಮಾಡಿದರು. ನಗರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ನೂತನ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಲು ಹೆಚ್ಚು ಅನುಕೂಲಕರವಾಗಿರುವ ನಿಟ್ಟಿನಲ್ಲಿ 2 ಸಂಚಾರಿ ಪ್ರಯೋಗಾಲಯ ವಾಹನಗಳು ಕಾರ್ಯನಿರ್ವಹಿಸಲಿವೆ. ಎರಡು ವಾಹನಕ್ಕೆ 38.50 ಲಕ್ಷ ರೂ. ವ್ಯಯಿಸಿದ್ದು, ಗುಣಮಟ್ಟ ಪರೀಕ್ಷಿಸುವ ಉಪಕರಣಗಳಿಗೆ 11.40 ಲಕ್ಷ ಸೇರಿ ಒಟ್ಟು 49.90 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಒಂದು ಸಂಚಾರಿ ವಾಹನದಲ್ಲಿ ಚಾಲಕ, ಲ್ಯಾಬ್ ಟೆಕ್ನಿಷಿಯನ್, ಲ್ಯಾಬ್ ಸಹಾಯಕ ಸೇರಿ ಮೂರು ಮಂದಿ ಕಾರ್ಯನಿರ್ವಹಿಸಲಿದ್ದು, ಈ 2 ವಾಹನಗಳು ಗುಣ ನಿಯಂತ್ರಣ ವಿಭಾಗದಡಿ ಕಾರ್ಯನಿರ್ವಹಿಸಲಿವೆ. ಪಾಲಿಕೆಯ ಎಂಟೂ ವಲಯಗಳಲ್ಲಿ ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಬಳಸಿಕೊಳ್ಳಲಾಗುತ್ತದೆ.
ವಾಹನದಲ್ಲಿ 16 ಉಪಕರಣ ಬಳಕೆ:
ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗಾಗಿ ಉಪಯೋಗಿಸುವ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಸಂಚಾರಿ ವಾಹನದಲ್ಲಿ ಬಿಟುಮಿನ್ ಮಾದರಿ, ಕಾಬುಲ್ ಸ್ಟೋನ್, ಕಬ್ಬಿಣ, ಅಗ್ರಿಗೇಟ್ಸ್ ಕಾಂಕ್ರೀಟ್ ಮಾದರಿ, ತಾಪಮಾನ ಪರಿಶೀಲಿಸುವ ಉಪಕರಣ, ಕೋರ್ ಕಟ್ಟಿಂಗ್ ಯಂತ್ರ, ತೂಕ ಮಾಡುವ ಯಂತ್ರ ಸೇರಿ 16 ಉಪಕರಣಗಳು ಇರಲಿವೆ. ಇವುಗಳನ್ನು ಬಳಸಿಕೊಂಡು ಗುಣ ನಿಯಂತ್ರಣ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.
ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಸಿದ್ದಪಡಿಸಿರುವ ಈ ಸಂಚಾರಿ ವಾಹನಗಳ ಸುರಕ್ಷತೆಯ ಹಿತದೃಷ್ಟಿಯಿಂದ, ಮುಂಜಾಗೃತಾ ಕ್ರಮವಾಗಿ ತಲಾ 1 ಅಗ್ನಿ ನಂದಕ ಕೂಡಾ ಇರಿಸಲಾಗಿದೆ ಎಂದು ಪಾಲಿಕೆಯ ಗುಣ ನಿಯಂತ್ರಣ ವಿಭಾಗದ ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.