ಹೆಚ್ಚುತ್ತಿರುವ ಮೀಸಲಾತಿ ಹೋರಾಟ: ಡಿಸಿಎಂ ಕಾರಜೋಳ ಏನಂದ್ರು ಗೊತ್ತಾ?

IMG-20210214-WA0064
Published on

ವಿಜಯಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಗೋವಿಂದ ಕಾರಜೋಳ ಅವರು ಸಂವಿಧಾನದಡಿ ಯಾರು ಅರ್ಹರಿದ್ದಾರೋ ಅವರೆಲ್ಲರೂ ಮೀಸಲಾತಿ ಪಡೆಯಲಿ ಎಂದಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿ ಹಿನ್ನೆಲೆ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೀಸಲಾತಿಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಆದರೆ, ‘ತಾವೂ ಸಹ ಮೀಸಲಾತಿ ಅಡಿಯಲ್ಲಿಯೇ ಡಿಸಿಎಂ ಹುದ್ದೆವರೆಗೆ ಹೋಗಿದ್ದು, ಮೀಸಲಾತಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆ ಅವಶ್ಯವಿದೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅನಿವಾರ್ಯವಾಗಿ ಉತ್ತತರಿಸುತ್ತಾ, "ದೇಶಕ್ಕೊಂದು ಸಂವಿಧಾನ ಇದೆ. ಸಂವಿಧಾನದ ಪ್ರಕಾರ ಹಿಂದುಳಿದವರಿಗೆ, ಶೋಷಿತರಿಗೆ, ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಬೇಕು. ಯಾರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಮೀಸಲಾತಿ ಸಿಗಬೇಕೆಂದು ಸಂವಿಧಾನ ಹೇಳಿದೆ. ಸಂವಿಧಾನದ ಮೀಸಲಾತಿ ವ್ಯಾಪ್ತಿಗೆ ಯಾರೆಲ್ಲಾ ಒಳಪಡುತ್ತಾರೋ ಅವರೆಲ್ಲರಿಗೂ ಸಿಗಬೇಕು" ಎಂದರು.

ಆದರೆ, ಸಂವಿಧಾನ ಬದ್ಧವಾಗಿಯೇ ಸಂಸತ್‌ನಲ್ಲಿ ಅನುಮೋದನೆಗೊಂಡು ರಾಜ್ಯಪತ್ರ ಹೊರಡಿಸಿದ್ದರೂ ಮೀಸಲಾತಿಯಿಂದ ವಂಚಿತಗೊಂಡಿರುವ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಈವರೆಗೂ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲವಲ್ಲ ಎಂಬ ಪ್ರಶ್ನೆಗೆ ಡಿಸಿಎಂ ಕಾರಜೋಳ ನಿರುತ್ತರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net