ಅಶಿಸ್ತು ಕಂಡು ಡಿಸಿಎಂ ಅಸಮಾಧಾನ

Published on

ಮೈಸೂರು: ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಗಳ ಬಳಿ ಜನಜಂಗುಳಿ ಕಂಡು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅರಮನೆ ಆವರಣದಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ‘ಕರ್ತವ್ಯ’ದ ಹೆಸರಿನಲ್ಲಿ ಜನಜಂಗುಳಿ ಉಂಟಾಗಿತ್ತು. ಮತ್ತೊಂದೆಡೆ ಕಲಾ ತಂಡಗಳ ಮೆರವಣಿಗೆ ಉದ್ದ ಇದ್ದುದ್ದರಿಂದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಲು ಸಮಯ ಮೀರುತ್ತಿದೆ ಎಂದು ಅಂಬಾರಿ ಹೊತ್ತು ಆನೆಗಳನ್ನು ಕರೆ ತರಲಾಯಿತು. ಇದರಿಂದ ವೇದಿಕೆ ಮುಂಭಾಗ ಜನಜಾತ್ರೆಯೇ ನೆರೆದಿತ್ತು.
ಜನರನ್ನು ನಿಯಂತ್ರಿಸಿ ಹಿಂದೆ ಕಳುಹಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಮತ್ತೆ, ಮತ್ತೆ ಮುಂದೆ ಬರುತ್ತಿದ್ದರು. ಹೀಗಾಗಿ ಪೊಲೀಸರು ಕೈ ಚೆಲ್ಲಿದಂತೆ ಕಂಡುಬಂತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಏರಿ ಪುಷ್ಪಾರ್ಚನೆ ಮಾಡಿದ ಡಿ.ಕೆ.ಶಿವಕುಮಾರ್ ಕೆಲಕಾಲ ವೇದಿಕೆ ಮೇಲೆಯೇ ನಿಂತರು. ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕೆಳಗಿಳಿದ ಮೇಲೆ ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರಿಗೆ ಜನಜಂಗುಳಿಯತ್ತ ಕೈ ತೋರಿಸಿ ಎಲ್ಲರನ್ನು ದೂರ ಕಳುಹಿಸಬೇಕಿತ್ತು. ಆನೆಗಳು ಹೋಗಲು ದಾರಿ ಮಾಡಿಕೊಡಬೇಕಿತ್ತು ಎಂದಾಗ ಜಿಲ್ಲಾಧಿಕಾರಿಗಳು ಅದಕ್ಕೆ ಸಮಜಾಯಿಸಿ ನೀಡಿದ್ದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net