ಮಳೆ ಹಾನಿ ತಡೆಗೆ ಸನ್ನದ್ದರಾಗಲು ಡಿಸಿಎಂ ಸೂಚನೆ

dcm meeting
Published on

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಅನಾಹುತ ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸಿ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು. ನಗರ ಅಭಿವೃದ್ಧಿಯ ಪಾಲುದಾರ ಸಂಸ್ಥೆಗಳ ಮುಖ್ಯಸ್ಥರು ಸಮನ್ವಯ ಸಾಧಿಸಿ ಕೆಲಸವನ್ನು ಯುದ್ಧೋಪಾದಿಯಲ್ಲಿ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಸೋಮವಾರ ಮಳೆ ಹಾನಿ ತಡೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸಹಿತ ವಿವಿಧ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಡಿಸಿಎಂ ಈ ಸೂಚನೆ ನೀಡಿದ್ದಾರೆ.

ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದೆ. ಮರಗಳ ತೆರವು ಸೇರಿ ಜನರಿಗೆ ಆಗುತ್ತಿದ್ದ ತೊಂದರೆಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಟ್ರಾಫಿಕ್ ಆಗದಂತೆ ನೋಡಿಕೊಂಡಿದ್ದಾರೆ. ಆದರೆ, ಇನ್ನೂ ಹಲವೆಡೆ ಮರಗಳನ್ನು ತೆರವು ಮಾಡಬೇಕಿದೆ. ರಸ್ತೆಗುಂಡಿ ಸೇರಿ ಇನ್ನಿತರ ಕೆಲವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿದರೆ ಮಳೆಯಿಂದ ಸಮಸ್ಯೆಯಾಗದು ಎಂಬ ಸಂಗತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಜಂಟಿ ಸಮೀಕ್ಷೆ ನಡೆಸಲು ಸೂಚನೆ:

ನಗರದಲ್ಲಿ ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ಸಮೀಕ್ಷೆ ನಡೆಸಿ ಕೆಲಸ ಮಾಡಬೇಕು. ಇದರಿಂದ ಮುಂಚಿತವಾಗಿ ಸಾಕಷ್ಟು ಹಾನಿ ತಪ್ಪಿಸಲು ಸಾಧ್ಯವಿದೆ. ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಉತ್ತಮ ಸಾಮರ್ಥ್ಯದ ಪಂಪ್‌ಸೆಟ್ ಜನರೇಟರ್‌ಗಳು ಹಾಗೂ ಹೆಚ್ಚು ನೀರು ಹರಿಯುವ ರಾಜಕಾಲುವೆ ಬಳಿ ಜೆಸಿಬಿ, ಟಿಪ್ಪರ್‌ಗಳನ್ನು ಮುನ್ನೆಚರಿಕೆ ಕ್ರಮವಾಗಿ ಸಿದ್ದಮಾಡಿಕೊಂಡಿರಬೇಕು. ಎನ್‌ಡಿಆರ್‌ಎ್ ತಂಡದೊಟ್ಟಿಗೂ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ.

ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ, ಜಲಮಂಡಳಿ, ಅರಣ್ಯ ಇಲಾಖೆ ಸೇರಿ ಬೆಂಗಳೂರಿಗೆ ಸಂಬಂಧಿಸಿದ ಯಾವ ಇಲಾಖೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ರಾಜಕಾಲುವೆಗೆ ಸಂಬಂಧಿಸಿದಂತೆ ಒಂದಷ್ಟು ಜನ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಮುಂದಿಟ್ಟು ಕೊಂಡು ಮೈಗೆ ಎಣ್ಣೆ ಹಚ್ಚಿಕೊಂಡು ಅಧಿಕಾರಿಗಳು ಕೆಲಸದಿಂದ ನುಣುಚಿಕೊಳ್ಳುವಂತಿಲ್ಲ. ಒತ್ತುವರಿಯಾಗಿರು ಜಾಗಗಳು ಸರ್ಕಾರದ ಆಸ್ತಿಗಳು. ನೀರು ಹರಿಯಲು ತೊಂದರೆಯಾಗುವಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕು. ಮುಂಬೈ ರೀತಿ ಹಳೆಯ ಕಟ್ಟಡಗಳು ಕುಸಿಯುವಂತಿದ್ದಲ್ಲಿ ಕೂಡಲೇ ಅವುಗಳನ್ನು ಗುರುತಿಸಿ ಸ್ಥಳಾಂತರಿಸಬೇಕು ಎಂದು ಡಿಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಫಲಿತಾಂಶದ ಬಳಿಕ ಪಾಲಿಕೆ ಚುನಾವಣೆಯತ್ತ ಗಮನ:

ಬಿಬಿಎಂಪಿ ಮೇಲೆ ಒತ್ತಡ ಆಗಿರುವ ಕಾರಣ ವಿಭಜನೆ ಮಾಡುವ ಯೋಚನೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ಮೊದಲು ಲೋಕಸಭೆ ಚುನಾವಣೆ ಫಲಿತಾಂಶ ಬರಲಿ. ನಂತರ ಪಾಲಿಕೆ ಎಲೆಕ್ಷನ್‌ಗೆ ಶುಭ ಮುಹೂರ್ತ ನೀಡೋಣ ಎಂದರು. ಕಾರ್ಪೊರೇಟರ್‌ಗಳು ಇಲ್ಲದ ಕಾರಣ ವಾರ್ಡ್ ಮಟ್ಟದಲ್ಲಿ ಜನರಿಗೆ ತೊಂದರೆಯಾಗುತ್ತಿದೆ ಎಂಬುದು ಸರಿಯಲ್ಲ. ಅಧಿಕಾರ ಇರಲಿ ಇಲ್ಲದಿರಲಿ ಅವರು ಜನರ ಸೇವೆಗೆ ಸಿದ್ಧರಿರಬೇಕು ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net