ರಸ್ತೆ ಬದಿ ಚರಂಡಿಗಳ ಸ್ವಚ್ಚತೆಗೆ ಡಿಸಿಎಂ ಸೂಚನೆ

dcm visit
Published on

ಬೆಂಗಳೂರು: ನಗರದಲ್ಲಿ ಭಾನುವಾರ ಮಧ್ಯರಾತ್ರಿ ಸುರಿದ ಮಳೆಯಿಂದ ನೀರು ನುಗ್ಗಿ ಹಾನಿಗೊಳಗಾದ ಪ್ರದೇಶಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪರಿಶೀಲನೆ ನಡೆಸಿ, ರಸ್ತೆ ಬದಿ ಚರಂಡಿಗಳ ಸ್ವಚ್ಚತೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಬ್ಬಾಳ ಸಮೀಪದ ಯೋಗೇಶ್ವರ ನಗರ, ನಾಗವಾರ ಜಂಕ್ಷನ್ ಹಾಗೂ ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್, ಸಿಲ್ಕ್ ಬೋರ್ಡ್​​, ಜಯದೇವ ಜಂಕ್ಷನ್ ಸೇರಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಳೆಹಾನಿ ಸಂಬಂಧಿತ ಪರಿಹಾರ ಕ್ರಮಕ್ಕೆ ಮುಂದಾಗಬೇಕು. ಜನರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಯೋಗೇಶ್ವರನಗರದ ಮೇಲ್ಸೇತುವೆ ಬಳಿ ನೀರಿನ ಹರಿವು ಹಾಗೂ ರಾಜಕಾಲುವೆ ವೀಕ್ಷಿಸಿ ನೀರು ಹರಿವಿಗೆ ತೊಂದರೆ ಏಕೆ ಉಂಟಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾಮಗಾರಿ ನಡೆದ ಬಳಿಕ ಕಟ್ಟಡ ತ್ಯಾಜ್ಯವನ್ನು ಸ್ಥಳದಲ್ಲೇ ಏಕೆ ಬಿಡಲಾಗಿದೆ? ಕೂಡಲೇ ಎಲ್ಲ ಕಡೆ ಸ್ವಚ್ಚಗೊಳಿಸಿ ಎಂದು ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ವೀಕ್ಷಿಸಿ ಮಾತನಾಡಿದ ಡಿಸಿಎಂ, ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಸ್ವಚ್ಚತೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲೆಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿ ನಡೆಸುವಾಗ ಕಟ್ಟಡ ತ್ಯಾಜ್ಯ ರಾಜಕಾಲುವೆಯಲ್ಲಿ ಉಳಿದಿದ್ದರೇ ಕೂಡಲೇ ತೆರವು ಮಾಡಬೇಕೆಂದು ಸೂಚನೆ ನೀಡಿದ್ದೇನೆ. ಕೆಲವೊಂದು ಕಡೆ ನೀರು ಹರಿಯುವ ಜಾಗಗಳು ಕಿರದಾಗಿದ್ದು ಅವುಗಳ ಅಗಲೀಕರಣ ಮಾಡುವಂತೆ ತಿಳಿಸಲಾಗಿದೆ ಎಂದರು.

ಆ್ಯಪ್ ಮೂಲಕ ರಸ್ತೆಗುಂಡಿಗೆ ಮುಕ್ತಿ:

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನಗರ ಸಂಚಾರದ ವೇಳೆ ಸಾಕಷ್ಟು ರಸ್ತೆಗುಂಡಿಗಳು ಕಂಡು ಬಂದವು. ಮಳೆ ಹೆಚ್ಚಾದ ಕಾರಣಕ್ಕೆ ಸುಮಾರು ಅರ್ಧ ಅಡಿಗೂ ಆಳದ ಗುಂಡಿಗಳಾಗಿವೆ. ಇವುಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂಚಾರಿ ಪೊಲೀಸರಿಗೂ ಎಲ್ಲೆಲ್ಲಿ ರಸ್ತೆಗುಂಡಿಗಳಿರುವ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ಈಗಾಗಲೇ ನೂತನ ಆ್ಯಪ್‌ಅನ್ನು ಬಿಡುಗಡೆ ಮಾಡಿದ್ದು, ಅಲ್ಲಿ ಫೋಟೊ ತೆಗೆದು ಹಾಕಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮಾರುತಿ ಸೇವಾನಗರದಲ್ಲಿ ಮರ ಬಿದ್ದ ಕಾರಣಕ್ಕೆ ನಾಲ್ವರು ಗಾಯಗೊಂಡಿದ್ದರು. ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಹಾಗೂ ಗಾಯಾಳುಗಳ ಎಲ್ಲ ಖರ್ಚು ವೆಚ್ಚವನ್ನು ಬಿಬಿಎಂಪಿಯಿಂದ ಭರಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ರಾಜಕಾಲುವೆಗಳಿಗೆ ರಕ್ಷಣಾ ಗೋಡೆಗಳನ್ನು ಎಲ್ಲ ಕಡೆ ನಿರ್ಮಾಣ ಹಾಗೂ ರಸ್ತೆ ನಿರ್ಮಾಣದ ತೀರ್ಮಾನ ಕೈಗೊಳ್ಳಲಾಗಿದೆ. ವಿವಿಧೆಡೆ ರಸ್ತೆ, ಫುಟ್‌ಪಾತ್‌ಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗಿದ್ದು, ಇದರ ಬಗ್ಗೆ ಕ್ರಮ ವಹಿಸಲಾಗುವುದು. ಉದ್ಯಾನಗಳಲ್ಲೂ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದು, ತೆರವಿಗೆ ಸೂಚಿಸಲಾಗುವುದು. ಒಣಗಿರುವ ಮರ, ಕೊಂಬೆಗಳ ತೆರವಿಗಾಗಿ ಸಾರ್ವಜನಿಕರು ದೂರಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗುವುದು.

- ಡಿ.ಕೆ.ಶಿವಕುಮಾರ್, ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net