

ಬೆಂಗಳೂರು: ನಗರದಲ್ಲಿ ಉಂಟಾಗಿರುವ ರಸ್ತೆಗುಂಡಿ ಸಮಸ್ಯೆ ಬಗ್ಗೆ ನಾಗರಿಕರು ಪದೇ ಪದೆ ದೂರುತ್ತಿದ್ದರೂ, ಬಿಬಿಎಂಪಿಯು ಪರಿಹಾರ ಕೈಗೊಳ್ಳಲು ಹಿಂದೇಟು ಹಾಕುತ್ತಿತ್ತು. ಮಳೆ ನೆಪ ಮಾಡಿ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸಲು ವಿಳಂಬ ಮಾಡದ್ದರಿಂದ ಸ್ವತ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಮಧ್ಯರಾತ್ರಿ ಸಿಟಿ ರೌಂಡ್ಸ್ ಕೈಗೊಂಡು ತಪಾಸಣೆ ನಡೆಸಿದರು.
ಭಾನುವಾರ ರಜಾದಿನ ಇದ್ದರೂ ಕೆಲವೆಡೆ ರಸ್ತೆ ಗುಂಡಿ ದುರಸ್ತಿ ಕಾರ್ಯವನ್ನು ಪಾಲಿಕೆ ಕೈಗೊಂಡಿತ್ತು. ಇದರ ಹೊರತಾಗಿಯೂ ಇನ್ನೂ ಹಲವೆಡೆ ಗುಂಡಿಗಳನ್ನು ಹಾಗೆಯೇ ಇವೆ. ಒಂದು ಕಡೆಯಿಂದ ಗುಂಡಿ ಮುಚ್ಚುತ್ತಿದ್ದರೂ, ಗುಣಮಟ್ಟದ ಕೆಲಸ ಆಗದ ಕಾರಣ ಅದೇ ಸ್ಥಳದಲ್ಲಿ ಗುಂಡಿಗಲು ಬಾಯ್ತೆರೆಯುತ್ತಿವೆ. ಅಧಿಕ ಸಂಖ್ಯೆಯ ವಾಹನಗಳ ಓಡಾಟದಿಂದಾಗಿ ಗುಂಡಿ ಸಮಸ್ಯೆ ಗಂಡಾಗುಂಡಿಗೆ ಅವಕಾಶ ಮಾಡಿಕೊಟ್ಟಿದೆ.
ಡಿಸಿಎಂ ಅವರು ಏರ್‌ಪೋರ್ಟ್ ರಸ್ತೆಯ ಬಾಗಲೂರು ರಸ್ತೆಯಲ್ಲಿ ಕೆಲ ದೂರ ನಡೆದು ಗುಂಡಿಗಳನ್ನು ವೀಕ್ಷಿಸಿದರು. ಸಮೀಪದಲ್ಲೇ ಕೆಲ ಗುಂಡಿಗಳನ್ನು ದುರಸ್ತಿ ಮಾಡಿದ್ದು, ಪ್ರಮುಖ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪಾಲಿಕೆ ಅಧಿಕಾರಿಗಳು ಮಳೆ ಬಂದಿದ್ದರಿಂದ ಎಲ್ಲೆಡೆ ಗುಂಡಿ ಮುಚ್ಚಲು ಸಾಧ್ಯವಾಗಲಿಲ್ಲ ಎಂದು ಕಾರಣ ನೀಡಿದರು. ಇದನ್ನು ಒಪ್ಪದ ಡಿಸಿಎಂ, ಮಳೆ ಬಂದಲ್ಲಿ ಕೋಲ್ಡ್ ಮಿಕ್ಸ್ ಬಳಸಿಕೊಂಡು ಗುಂಡಿ ಮುಚ್ಚಲು ಅವಕಾಶ ಇದೆ. ಈ ಕಾರ್ಯವನ್ನು ಮಾಡದೆ ನೆಪ ಹೇಳಬೇಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆನಂತರ ಯಲಹಂಕ ವಲಯದ ವಿವಿಧೆಡೆ ರಸ್ತೆಗುಂಡಿಗಳನ್ನು ತಪಾಸಣೆ ಮಾಡಿದರು. ಮಳೆ ಬೀಳದಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಕಳೆದೆರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಉಪ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು.
ತಪಾಸಣೆ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ಯಲಹಂಕ ವಲಯ ಆಯುಕ್ತ ಕರಿಗೌಡ, ಸ್ಮೈಲ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಬಿ.ಎಸ್.ಪ್ರಹ್ಲಾದ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.