

ತುಮಕೂರು: ರಾಜಕೀಯದಲ್ಲಿ ಅಸ್ಪೃಶ್ಯತೆ ಅನುಭವಿಸಿದ್ದೇವೆ, ವೋಟ್ ಬ್ಯಾಂಕ್ ಮಾಡಿಕೊಂಡು ಆಡಳಿತ ಮಾಡಿದರು, ಕಾಲ ಬದಲಾಗಿದೆ, ಯಾರು ನಮ್ಮನ್ನು ತುಳಿದಿದ್ದರೋ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದ ನಾಗಾರ್ಜುನ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಮಾತನಾಡಿದರು. ಮಾದಿಗ ಸಮುದಾಯವನ್ನು ಗುರುತಿಸಿ, ಗೌರವಿಸುವಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ, ಸಮುದಾಯವನ್ನು ಸಂಘಟಿಸುವ ಕೆಲಸವಾಗಬೇಕು, ಸಮುದಾಯಕ್ಕೆ ಬಲ ತುಂಬಬೇಕು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ತುಮಕೂರು ಜಿಲ್ಲೆ ಮಾದಿಗ ಸಮುದಾಯದ ಶಕ್ತಿ ಕೇಂದ್ರ, ಸಂಘಟನೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ರಾಜಕೀಯ ಶಕ್ತಿ ಪಡೆಯಲು ಆಗಲಿಲ್ಲ ಇದಕ್ಕೆ ಒಗ್ಗಟ್ಟಿನ ಕೊರತೆಯೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಎ.ನಾರಾಯಣಸ್ವಾಮಿ, ಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮೀಜಿ, ಶಾಸಕ ಜಿ.ಬಿ.ಜ್ಯೊತಿಗಣೇಶ್, ಜಿಪಂ ಉಪಾಧ್ಯಕ್ಷೆ ಶಾರದಾ, ಉಪಮೇಯರ್ ರೂಪಾಶ್ರೀ, ಮಾಜಿ ಶಾಸಕರಾದ ಗಂಗಹನುಮಯ್ಯ, ಕೆ.ಎಂ.ತಿಮ್ಮರಾಯಪ್ಪ ಇದ್ದರು.