

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಿಸುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್‌ನಲ್ಲಿರುವ ಪ್ರಸಿದ್ಧ ‘ದ ಎಡ್ಜ್ ಸ್ಕೈ ಡೆಕ್’ಗೆ ಭೇಟಿ ನೀಡಿ ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲಿಸಿದ್ದಾರೆ.
ಹಡ್ಸನ್ಸ್ ಯಾರ್ಡ್ಸ್ 30 ವೆಸ್ಟರ್ನ್ಸ್ ಹೆಮಿಸ್ಫರ್‌ನಲ್ಲಿರುವ ಕಟ್ಟಡದ 100ನೇ ಮಹಡಿಯಲ್ಲಿ 7,500 ಚದರಡಿಯ ಈ ಡೆಕ್‌ಅನ್ನು ಡಿಸಿಎಂ ವೀಕ್ಷಣೆ ಮಾಡಿದರು. ಈ ಡೆಕ್ ಫ್ರೋರ್‌ನಿಂದ ಹಿಡಿದು ಸೀಲಿಂಗ್‌ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದ್ದು, ಇದು ನ್ಯೂಯಾಕ್ಸ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ.
ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಡಾ. ಬಾಬು ಕೀಲಾರರೊಂದಿಗೆ ಚರ್ಚಿಸಿದರು. ಅಲ್ಲದೆ ಡಿಸಿಎಮ ಅವರು ಕೀಲಾರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಿಸಿದರು. ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಎಚ್‌ಒಕೆಯ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಜತೆ ಡಿಸಿಎಂ ಚರ್ಚೆ ನಡೆಸಿದರು.
ಈ ವೇಳೆ ಡಿ.ಕೆ. ಶಿವಕುಮಾರ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಆಲೋಚನೆಗಳನ್ನು ಒಟ್ಟುಗೂಡಿಸಿದರೆ ಬೆಂಗಳೂರಿನ ಸ್ಕೈ ಲೈನ್‌ಗೆ ಹೊಸ ವ್ಯಾಖ್ಯಾನ ನೀಡುವುದರ ಜತೆಗೆ ನಗರಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.