ಸ್ಕೈ ಡೆಕ್ ಯೋಜೆಗೆ ಸ್ಥಳ ಪರಿಶೀಲಿಸಿದ ಡಿಸಿಎಂ ಡಿಕೆಎಸ್​​

skydeck
Published on

ಬೆಂಗಳೂರು: ಉದ್ದೇಶಿತ ಸ್ಕೈ ಡೆಕ್ (ಆಕಾಶ ಗೋಪುರ) ಯೋಜನೆ ಜಾರಿ ಹಿನ್ನೆಲೆಯಲ್ಲಿ ಅಗತ್ಯ ಜಾಗ ಗುರುತಿಸುವ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಂಗಳವಾರ ಸ್ಥಳಿಯ ಶಾಸಕ ಹಾಗೂ ಬಿಡಿಎ ಅಧಿಕಾರಿಗಳೊಂದಿಗೆ ಬಡಾವಣೆ ವ್ಯಾಪ್ತಿಗೆ ಸೇರಿರುವ ಕೊಮ್ಮಘಟ್ಟ ಬಳಿಯಿರುವ ಬೈರೋಹಳ್ಳಿಗೆ ತೆರಳಿ ಅಲ್ಲಿನ ಜಮೀನು ಲಭ್ಯ ಬಗ್ಗೆ ಖುದ್ದು ಮಾಹಿತಿ ಪಡೆದರು. ಇಲ್ಲಿನ ಜಾಗವು ಲೇಔಟ್ ಆಗಿ ಇನ್ನೂ ಅಭಿವೃದ್ಧಿಯಾಗದ ಕಾರಣ ಸುಮಾರು 25 ಎಕರೆ ಜಾಗವನ್ನು ಸ್ಕೈ ಡೆಕ್ ಯೋಜನೆಗೆ ಪಡೆಯಲು ಚರ್ಚೆ ನಡೆಯಿತು.

ಸ್ಕೈ ಡೆಕ್ ಯೋಜನೆಗೆ ಹೊಸದಾಗಿ ಗುರುತಿಸಿರುವ ಜಾಗವು ಅಂದಾಜು 50 ಎಕರೆಗೂ ಹೆಚ್ಚು ವಿಸ್ತಾರವಿದೆ. ಈ ಜಮೀನು ಕೆಂಪೇಗೌಡ ಲೇಔಟ್ ನಿರ್ಮಿಸಲು ಅಧಿಸೂಚನೆ ಹೊರಡಿಸಿದ್ದರೂ, ಇನ್ನೂ ಬಿಡಿಎಯಿಂದ ಭೂಸ್ವಾಧೀನವಾಗಿಲ್ಲ. ಭೂ ಮಾಲೀಕರು ನ್ಯಾಯಾಲಯದ ಕದ ತಟ್ಟಿದ್ದಿ ಕಾರಣ ಪ್ರಾಧಿಕಾರವು ಈ ಜಮೀನಿನಲ್ಲಿ ಸೈಟ್ ರಚಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಖಾಲಿಯಿರು ಈ ಜಾಗವು ಆಕಾಶ ಗೋಪುರ ಸ್ಥಾಪಿಸಲು ಪ್ರಶಸ್ತ್ಯ ಜಾಗವೆಂದು ಹೇಳಲಾಗಿದೆ. ಹಾಗಾಗಿ ಡಿಸಿಎಂ ಅವರು ಸ್ಥಳಪರಿಶೀಲನೆ ನಡೆಸಿದ್ದು, ಇನ್ನಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ಆಕಾಶ ಗೋಪುರ ಸ್ಥಾಪನೆ ಸಂಬಂಧ ಮೊದಲು ಬೈಯಪ್ಪನಹಳ್ಳಿಯ ಎನ್‌ಜಿಇಎಎಫ್​​ ಕಾರ್ಖಾನೆಯ ಜಾಗವನ್ನು ಗುರುತಿಸಲಾಗಿತ್ತು. ನಂತರ ಯಶವಂತಪುರದ ಮೈಸೂರು ಲ್ಯಾಂಪ್ಸ್/ಮೈಸೂರು ಸಾಬೂನು ಕಾರ್ಖಾನೆ ಜಾಗ, ಹೆಮ್ಮಿಗೆಪುರದ ನೈಸ್ ರಸ್ತೆ ಬಳಿ ಜಾಗ ಗುರುತಿಸಲಾಗಿತ್ತು. ಇದಕ್ಕೆ ಎಚ್‌ಎಎಲ್ ಆಕ್ಷೇಪಿಸಿ ವಿಮಾನ ಹಾರಾಟಕ್ಕೆ ತೊಂದರೆ ಆಗಲಿದೆ ಎಂದು ಹೇಳಿದ್ದರಿಂದ ಬೇರೆ ಜಾಗದ ಹುಡುಕಾಟ ನಡೆಸಲಾಯಿತು. ಇತ್ತೀಚಿಗೆ ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಜಾಗ ಗುರುತಿಸಿದಾಗ ಜೀವ ವೈವಿಧ್ಯ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶಿತ ಸ್ಕೈ ಡೆಕ್‌ಗೆ ಅವಕಾಶ ಸಿಗಲಿಲ್ಲ. ಇದೀಗ ಬಿಡಿಎ ರಚಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಜಾಗದ ಪರಿಶೀಲನೆ ನಡೆಸಲಾಗಿದೆ.

ಇದೇ ವೇಳೆ ಡಿಸಿಎಂ ಅವರು ಬಡಾವಣೆಯಲ್ಲಿ ನಡೆದಿರುವ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಎಸ್.ಟಿ.ಸೋಮಶೇಖರ್, ಬಿಡಿಎ ಆಯುಕ್ತ ಪಿ.ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಹಾಗೂ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net