

ಹುಬ್ಬಳ್ಳಿ: ಜಮೀನಿನ ದಾಖಲೆಗೆ ಸಂಬಂಧಿಸಿ ಎದ್ದಿರುವ ವಕ್ಫ ವಿವಾದವು ಬಿಜೆಪಿಯವರು ಸೃಷ್ಟಿ ಮಾಡಿದ್ದು, ಯಾರನ್ನೂ ನಾವು ಒಕ್ಕಲೆಬ್ಬಿಸುವುದಿಲ್ಲ, ಸರ್ಕಾರ ರೈತರ ರಕ್ಷಣೆಗೆ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ವಿವಾದ ಹುಟ್ಟು ಹಾಕಿದೆ. ವಕ್ಫ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019ಕ್ಕಿಂತ ಮೊದಲು ನೋಟಿಸ್ ಕೊಟ್ಟಿದ್ದು ಬಿಜೆಪಿ. ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ನೋಟಿಸ್ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ. ಜನ ಶಾಂತಿಯುತವಾಗಿರುವುದು ಅವರಿಗೆ ಬೇಕಾಗಿಲ್ಲ ಎಂದು ದೂರಿದರು.
ನಾವು ರೈತರ ದಾಖಲೆಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ಅವರ ಆತಂಕ ದೂರ ಮಾಡುತ್ತೇವೆ. ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದರು.
ಜೆಪಿಸಿ ಮಾಹಿತಿ ನೀಡಿಲ್ಲ: ವಕ್ಫ ತಿದ್ದುಪಡಿ ಮಸೂದೆ ಸಂಬಂಧಿತ ಜಂಟಿ ಸದನ ಸಮಿತಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ, ರಾಜ್ಯದ ವಿಚಾರಕ್ಕಾಗಿ ಭೇಟಿ ನೀಡುವ ಅಧಿಕಾರ ಜೆಪಿಸಿಗೆ ಇಲ್ಲ. ಒಂದು ವೇಳೆ ಭೇಟಿ ನೀಡುವುದಾದರೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಮಿತಿಯು ತಂಡವಾಗಿ ಬರಬೇಕು. ಇಲ್ಲಿ ಕೇವಲ ಸಮಿತಿ ಅಧ್ಯಕ್ಷರು ಬಂದಿದ್ದಾರೆ ಎಂದರೆ ಅವರು ಪಕ್ಷದ ಕೆಲಸಕ್ಕಾಗಿ ಬಂದಿರಬಹುದು ಎಂದು ಲೇವಡಿ ಮಾಡಿದರು.
ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸೋಮಣ್ಣ ಅವರ ಜತೆ ಅಧ್ಯಕ್ಷರು ಬಂದಿದ್ದಾರೆ. ಇವರಿಬ್ಬರು ಜೆಪಿಸಿ ಸದಸ್ಯರೆ? ಕೇವಲ ಬಿಜೆಪಿ ಸದಸ್ಯರು ಮಾತ್ರ ಬಂದಿದ್ದಾರೆ. ಇದು ರಾಜಕೀಯ ಉದ್ದೇಶದ ಭೇಟಿ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ. ಅವರು ಏನಾದರೂ ರಾಜಕೀಯ ನಾಟಕ ಮಾಡಲಿ, ಸತ್ಯಾಂಶ ಬೇರೆ ಇದೆ ಎಂದು ಹೇಳಿದರು.
ಶಿವಕುಮಾರ ಮುಂದೆ ಯಾಕೆ ತಗ್ಗಿ-ಬಗ್ಗಿ ನಡೆಯಬೇಕು ಎಂಬ ಆರ್. ಅಶೋಕ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ನಾನು ಅವರ ವಿಚಾರ ಮಾತನಾಡಿಲ್ಲ. ಜಯನಗರ ಕ್ಷೇತ್ರದ ಅನುದಾನ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರ ಜತೆ ಚರ್ಚೆ ಮಾಡಿದ್ದೇನೆ. ಅಲ್ಲಿನ ಶಾಸಕರು ನಾನು ಸಚಿವನಾದ ನಂತರ ಬೆಂಗಳೂರು ಅಧೋಗತಿಗೆ ಹೋಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಎಲ್ಲಿ ಕೆಟ್ಟಿದೆ? ಆರ್. ಅಶೋಕ ಅವರು ಸಾಂವಿಧಾನಿಕ ಸಂಸ್ಥೆ ಲೋಕಾಯುಕ್ತ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಎಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ? ವಿರೋಧ ಪಕ್ಷದ ನಾಯಕರಾಗಿ ಅವರು ನೀಡಿರುವ ಹೇಳಿಕೆ ಸಮಂಜಸವೇ ಎಂದು ಆಕ್ರೋಶಗೊಂಡರು.