

ಬೆಂಗಳೂರು: ವರ್ಷಪೂರ್ತಿ ಒಂದಿಲ್ಲೊಂದು ಪ್ರತಿಭಟನೆ, ಮತ್ತಿತರ ಕಾರಣಗಳಿಂದ ಬ್ಯುಸಿಯಾಗಿರುವ ಫ್ರೀಡಂ ಪಾರ್ಕ್ ಸುತ್ತಮುತ್ತ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಪಾರ್ಕಿಂಗ್ ನಿಷೇಧಿಸುವುದಾಗಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಫ್ರೀಡಂಪಾರ್ಕ್‌ನ ಪ್ರತಿಭಟನಾ ಸಭಾಂಗಣ ಕಟ್ಟಡದಲ್ಲಿ ಬಿಬಿಎಂಪಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿರುವ ರೈಟ್ ಪಾರ್ಕಿಂಗ್ ಸಂಕೀರ್ಣವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಅತಿಹೆಚ್ಚು ಜನ ಬಂದು ಹೋಗುವ ಮೆಜೆಸ್ಟಿಕ್, ರೈಲ್ವೇನಿಲ್ದಾಣ, ಚಿಕ್ಕಪೇಟೆ ವಾಣಿಜ್ಯ ಕೇಂದ್ರ, ವಿಧಾನಸೌಧ ಮತ್ತಿತರ ಏರಿಯಾಗಳಿಗೆ ಹೊಂದಿಕೊಂಡಿರುವ ಫ್ರೀಡಂಪಾರ್ಕ್ ಸುತ್ತಮುತ್ತ ಈಗಾಗಲೇ ಪೊಲೀಸರು 39 ಪ್ರಮುಖ ರಸ್ತೆಗಳನ್ನು ಗುರುತಿಸಿದ್ದು, ಕಡ್ಡಾಯವಾಗಿ ಈ ಏರಿಯಾ ಸುತ್ತಮುತ್ತ ಪಾರ್ಕಿಂಗ್ ನಿಷೇಧಿಸಲು ಸೂಚನೆ ನೀಡುವುದಾಗಿ ಡಿಕೆಶಿ ಹೇಳಿದರು.
ಬಿಬಿಎಂಪಿ ಬಹಳ ಶ್ರಮವಹಿಸಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಪ್ರಿನ್ಸ್ ರಾಯಲ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈಟ್ ಪಾರ್ಕಿಂಗ್ ಹೆಸರಿನಲ್ಲಿ ಬಹುಮಹಡಿ ವಾಹನ ನಿಲ್ದಾಣವನ್ನು ನಿರ್ಮಾಣ ಮಾಡಿದೆ. ಇದನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಂಡಾಗ ಮಾತ್ರ ಬಿಬಿಎಂಪಿ ಮತ್ತು ನಿರ್ವಹಣೆ ಮಾಡುವ ಸಂಸ್ಥೆಯ ಶ್ರಮ ಸಾರ್ಥಕವಾಗುತ್ತದೆ. ಈವರೆಗೆ 7 ಟೆಂಡರ್‌ಗಳು ೇಲಾಗಿದ್ದು, 8ನೇಯ ಟೆಂಡರ್ ಕಾರ್ಯಗತವಾಗಿದೆ. ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಬೆಂಗಳೂರಿನ ಖ್ಯಾತಿಗೆ ಈ ಯೋಜನೆ ಹೊಸ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೊಸರೂಪ ನೀಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಹೊಸ ಜಾಹೀರಾತು ನೀತಿ, ಕಸವಿಲೇವಾರಿ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳ ಮೀಟಿಂಗ್ ಕರೆಯಲಾಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಿಎಂಆರ್‌ಸಿಎಲ್ ಮತ್ತು ಬಿಬಿಎಂಪಿ ಜಂಟಿಯಾಗಿ ಡಬ್ಬಲ್ ಡೆಕ್ಕರ್ ್ಲೈಓವರ್‌ಗಳನ್ನು ನಿರ್ಮಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ಡಿಕೆಶಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಪ್ರಿನ್ಸ್ ರಾಯಲ್ಸ್ ಸಂಸ್ಥೆ ಎಂಡಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರಿನ ಅಂತರಾಷ್ಟ್ರೀಯ ಖ್ಯಾತಿಗೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಹೊಸ ಮೈಲುಗಲ್ಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಬಣ್ಣಿಸಿದ್ದಾರೆ. ವಿದೇಶಗಳಲ್ಲಿರುವ ಈ ಯೋಜನೆ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಿರ್ಮಾಣಗೊಂಡಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು.
ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವವರ ಅನುಕೂಲಕ್ಕೆ ಸುಮಾರು 50 ಸಾವಿರ ಚದರಡಿಯ ಬೃಹತ್ ಸಭಾಂಗಣವನ್ನು ಬಿಬಿಎಂಪಿ ನಿರ್ಮಾಣ ಮಾಡಿದ್ದು, ಈ ಬಹುಮಹಡಿ ಕಟ್ಟಡವನ್ನು ಪಾರ್ಕಿಂಗ್‌ಗೆ ಬಳಸಲಾಗಿದೆ. ಈ ಯೋಜನೆಗೆ 79 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಈ ಮೂಲಕ ಸಾಕಾರಗೊಳಿಸಲು ಬಿಬಿಎಂಪಿ ಕೆಲಸ ಮಾಡಿದೆ. ಈ ಕಟ್ಟಡದ ಮೇಲ್ಛಾವಣಿಯಲ್ಲಿ 500 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಲಾಗಿದ್ದು, ಅದರಿಂದಲೂ ಬಿಬಿಎಂಪಿಗೆ ಆದಾಯ ಬರಲಿದೆ ಎಂದು ಅವರು ವಿವರಿಸಿದರು.