

ರಾಯಚೂರು ಮೂರು ರಾಜ್ಯದ ಜನರ ಅಂತರ್ಜಲ ವೃದ್ಧಿಗಾಗಿ ಜಿಲ್ಲೆಯಲ್ಲಿ ತುಂಗಾಭದ್ರ ನದಿಗೆ ಚೀಕಲ ಪರ್ವಿ ಹಾಗೂ ಚಿಕ್ಕ ಮಂಚಾಲಿಯಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ಕಾಮಗಾರಿಗಳಿಗೆ ಕಳೆದ ವರ್ಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆದರೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಆಕ್ಷೇಪಣೆ ಕುರಿತು ಎರಡು ರಾಜ್ಯಗಳ ಸಹಮತದೊಂದಿಗೆ ಕಾಮಗಾರಿ ನಿರ್ವಹಿಸಲಾಗುವುದೆಂದು ಡಿಸಿಎಂ ಡಿಕೆ.ಶಿವಕುಮಾರ ಭರವಸೆ ನೀಡಿದರು.
ಮಂತ್ರಾಲಯದಲ್ಲಿ ಬುಧವಾರ ಪದ್ಮನಾಭ ವಸತಿ ಗೃಹದಲ್ಲಿ ಜಿಲ್ಲೆಯ ಅಭಿವೃದ್ದಿ ಕುರಿತು ಸಚಿವ, ಶಾಸಕರೊಂದಿಗೆ ಮಾತನಾಡಿ, ಜನರಿಗೆ ಸಂಪರ್ಕ ಕಲ್ಪಿಸಲು ಹಾಗೂ ಕುಡಿಯುವ ನೀರು, ನೀರಾವರಿ ಸೇರಿ ಅಂತರ್ಜಲ ವೃದ್ಧಿಗಾಗಿ ಈಗಾಗಲೇ ಬ್ರಿಡ್ಜ್ ಕಂ ಬ್ಯಾರೆಜ್ನ ನೀಲ ನಕ್ಷೆಯೊಂದಿಗೆ ವಿವರಣೆ ನೀಡಿದ ಅಧಿಕಾರಿಗಳು, ಚಿಕ್ಕ ಮಂಚಾಲಿಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ, ಇದೆ ನದಿಗೆ ಹೊಂದಿಕೊಂಡಂತೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಸುಂಕೇಶ್ವರ ಬ್ರಿಡ್ಜ್ ಕಂ ಬ್ಯಾರೇಜ್ ಗೆ ನೀರಿನ ಮಟ್ಟ ಕುಸಿತವಾಗಲಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ.
ಆದರೆ ಅವರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಈ ಕುರಿತು ವರದಿ ಸಿದ್ದಪಡಿಸಲಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ನದಿಗೆ ಹೆಚ್ಚಿನ ಒಳ ಹರಿವು ನೀರು ಬರುವುದರಿಂದ ಆ ಸಂದರ್ಭದಲ್ಲಿ ಹೆಚ್ಚಿನ ನೀರನ್ನು ಸಂಗ್ರಹಿಸಿ ಕುಡಿಯಲು ನೀರು ಸರಬರಾಜು ಮಾಡಬಹುದಾಗಿದೆ ಇದರಿಂದ ಆಂಧ್ರಕ್ಕೆ ಯಾವುದೆ ತೊಂದರೆಯಿಲ್ಲ. ಅಲ್ಲದೆ ಚೀಕಲಪರ್ವಿ ಬ್ರಿಡ್ಜ್ ಕಂ ಬ್ಯಾರೇಜ್ ಗೂ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದರು.
ಕಳೆದ ವರ್ಷ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 158 ಕೋಟಿ ರೂ. ಚಿಕಲಪರ್ವಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಅನುಮೋದನೆ ನೀಡಲಾಗಿತ್ತು. ಆಂದ್ರ ಪ್ರದೇಶ ಸರ್ಕಾರ ಹಾಗೂ ತೆಲಂಗಾಣ ಸರ್ಕಾರ ಆಕ್ಷೇಪಣೆಯಿಂದ ಕಾಮಗಾರಿ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಈ ಕುರಿತು ಎರಡು ರಾಜ್ಯಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ತುರುವಿಹಾಳ ಬಸನಗೌಡ ,ಎಂಎಲ್ಸಿ ಬಸನಗೌಡ ಬಾದರ್ಲಿ, ಎ.ವಸಂತ ಕುಮಾರ್ ಸೇರಿದಂತೆ ಅನೇಕರು ಇದ್ದರು.