ಉಡುಪಿ ಕಿನ್ನಿಮುಲ್ಕಿ ಗಣೇಶೋತ್ಸವಕ್ಕೆ ಆ.25ರಂದು ಡಿಕೆಶಿ ಚಾಲನೆ

Krishnamurthy
Published on

ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಮಾಹಿತಿ

14 ದಿನ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ಕನ್ನರ್ಪಾಡಿ-ಕಿನ್ನಮುಲ್ಕಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 20ನೇ ವರ್ಷದ ಗಣೇಶೋತ್ಸವದ ನಿಮಿತ್ತ 14 ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪ ಗಣಪತಿ ಮೈದಾನದಲ್ಲಿ ಆ.25ರಂದು ಸಂಜೆ 5 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗಣೇಶೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಮಾಹಿತಿ ನೀಡಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಆಗಸ್ಟ್​ 23ರಮದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.25ರಂದು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಹೊರಗಾಣಿಕೆಯ ಬೃಹತ್​ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದಾರೆ. ನಾಡೋಜ ಜಿ.ಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಆಕರ್ಷಣೆಗಾಗಿ ವಸ್ತು ಪ್ರದರ್ಶನ

ಜನಾಕರ್ಷಣೆಗಾಗಿ 55 ದೇಶಗಳ ಹಳೆಯ ನಾಣ್ಯ-ನೋಟುಗಳು, ಹಳೆಯ ವಾಹನ ಹಾಗೂ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದ್ದು, ಸ್ಪೀಕರ್​ ಯು.ಟಿ. ಖಾದರ್​ ಉದ್ಘಾಟಿಸಲಿದ್ದಾರೆ. ವಿಪ ಸದಸ್ಯ ಐವನ್​ ಡಿಸೋಜಾ ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ. ವಿಪ ಸದಸ್ಯ ಮಂಜುನಾಥ ಭಂಡಾರಿ ಧ್ವಜಾರೋಹಣ, ಮಾಜಿ ಸಚಿವ ವಿನಯಕುಮಾರ ಸೊರಕೆ ವಿದ್ಯುತ್​ ದೀಪಗಳ ಅನಾವರಣ, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಪ್ರಸಾದ ನೇತ್ರಾಲಯದ ಡಾ.ಕೃಷ್ಣಪ್ರಸಾದ್​ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅದಮಾರು ಶ್ರೀಗಳಿಂದ ಪ್ರವಚನ

ಆ.26ರಿಂದ ಪ್ರತಿದಿನ ಸಂಜೆ 5 ಗಂಟೆಗೆ ಧಾರ್ಮಿಕ ಪ್ರವಚನ ಇರಲಿದ್ದು, ಆರಂಭದ 4 ದಿನ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪ್ರವಚನ ನೀಡಲಿದ್ದಾರೆ. ಪ್ರತಿದಿನವೂ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ.28, ಆ.31, ಸೆ.2 ಹಾಗೂ ಸೆ. 5ರಂದು ಮಧ್ಯಾಹ್ನ 12:30ರಿಂದ ಮಹಾ ಅನ್ನಸಂತರ್ಪಣೆ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯಕರ ಶೇರಿಗಾರ್​, ರವೀಂದ್ರ ಶೆಟ್ಟಿಗಾರ, ನವೀನ ಶೆಟ್ಟಿ ಹಾಗೂ ಪ್ರಶಾಂತ ಆಚಾರ್ಯ ಇದ್ದರು.

27ಕ್ಕೆ ಗಣೇಶ ಪ್ರತಿಷ್ಠಾಪನೆ

ಆ.27ರಂದು ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ. ಸೆ.7ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಉದ್ಘಾಟಿಸಲಿದ್ದಾರೆ. ಸಮಾರಂಭದ ಬಳಿಕ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಕೆ.ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net