ಧರ್ಮ ಯಾವುದಾದರೂ ತತ್ವ ಒಂದೇ...

DK Lead
Published on

ಉಡುಪಿಯಲ್ಲಿ ಅಧ್ಯಾತ್ಮ ಪ್ರವಚನ ನೀಡಿದ ಡಿಕೆಶಿ

ಮಾತುಗಾರಿಕೆಗೆ ತಲೆದೂಗಿದ ಪ್ರೇಕ್ಷಕರು

ವಿಜಯವಾಣಿ ಸುದ್ದಿಜಾಲ ಉಡುಪಿ

ಮನುಷ್ಯನಿಗೆ ಆತ್ಮವಿಶ್ವಾಸ ಹೆಚ್ಚಿಸುವುದು ನಮ್ಮ ಧರ್ಮವೇ ಆಗಿದೆ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೇವರೊಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವರೊಬ್ಬ ನಾಮ ಹಲವು. ಅನೇಕ ಹೆಸರಲ್ಲಿ ದೇವರುಗಳನ್ನು ಕಾಣುತ್ತಿದ್ದೇವೆ ಎಂದು ಉಪಮುಖ್ಯಂತ್ರಿ ಡಿ.ಕೆ. ಶಿವಕುಮಾರ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳ ಜನ್ಮನಕ್ಷತ್ರೋತ್ಸವದ ನಿಮಿತ್ತ ಆಗಸ್ಟ್​ 30ರಂದು ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ತನ್ನಲ್ಲಿರುವ ಅಧ್ಯಾತ್ಮದ ಒಲವನ್ನು ಮನೋಜ್ಞವಾಗಿ ಬಿತ್ತರಿಸಿದರು. ತನ್ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಬಗೆಬಗೆಯಲ್ಲಿ ಶ್ರೀಕೃಷ್ಣನ ವರ್ಣನೆ

DK 2
ದೇವರೊಬ್ಬ ನಾಮ ಹಲವು ಎಂಬುದನ್ನು ನಂಬಿದ್ದೇವೆ. ನಾವೆಲ್ಲರೂ ಯಾಕೆ ಶ್ರೀಕೃಷ್ಣನನ್ನು ಈ ಪರಿಯಾಗಿ ಒಪ್ಪುತ್ತಿದ್ದೇವೆಯೆಂದರೆ ಆತನೊಬ್ಬ ಶಿಕ್ಷಕ. ಮಾರ್ಗದರ್ಶಕ. ಚಿಂತಕ. ಜೊತೆಗೆ ರಾಜಕಾರಣಿಯೂ ಕೂಡ. ಪ್ರೇಮಿ, ತತ್ವಜ್ಞಾನಿಯೂ ಹೌದು. ಮನುಷ್ಯ ಯಶಸ್ಸು ಕಾಣಲು ಧರ್ಮರಾಯನ ಧರ್ಮ, ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿಧುರನ ನೀತಿ, ಶ್ರೀಕೃಷ್ಣ ತಂತ್ರವೂ ಸಹ ಇರಬೇಕು ಎಂದು ಕೃಷ್ಣನ ಗುಣಗಾನ ಮಾಡಿದರು.

ಸಂಸ್ಕೃತಿಯೇ ನಮ್ಮ ದೇಶದ ಶಕ್ತಿ

DK 3
ಅಲೆಕ್ಸಾಂಡರ್​ ಭಾರತವನ್ನು ವಶಪಡಿಸಿಕೊಳ್ಳಲು ಹೋಗುತ್ತಿರುವುದಾಗಿ ತನ್ನ ಗುರುವಾದ ಅರಿಸ್ಟಾಟಲ್​ನಲ್ಲಿ ಹೇಳಿಕೊಂಡಿದ್ದನು. ಭಾರತದಿಂದ ನನಗೆ 5 ವಸ್ತುವನ್ನು ತೆಗೆದುಕೊಂಡು ಬರಬೇಕು. ರಾಮಾಯಣ ಗ್ರಂಥ, ಮಹಾಭಾರತ ಗ್ರಂಥ, ಗಂಗಾಜಲ, ಶ್ರೀಕೃಷ್ಣನ ಕೊಳಲು ಹಾಗೂ ಓರ್ವ ತತ್ವಜ್ಞಾನಿಯನ್ನು ಕರೆದುಕೊಂಡು ಬರಬೇಕೆಂದು ತಿಳಿಸಿದ್ದರು. ಅದೆಲ್ಲವೂ ಭಾರತದ ದೇಶದ ಸಂಸ್ಕೃತಿ. ಅದುವೇ ನಮ್ಮ ದೇಶದ ಆಸ್ತಿ. ಅದನ್ನು ತಂದರೆ ಭಾರತವನ್ನೇ ವಶಪಡಿಸಿಕೊಳ್ಳಬಹುದು ಅಂದಿದ್ದರು. ಅಂದರೆ ನಮ್ಮ ಧರ್ಮ ಎಷ್ಟು ಪ್ರಬಲವಾಗಿದೆ ಅನ್ನುವುದಕ್ಕೆ ಅರಿಸ್ಟಾಟಲ್​ನ ಮಾತು ಸಾಕ್ಷಿಯಾಗಿದೆ ಎಂದರು.

ಗುರುಗಳೇ ನಾನು ತಪ್ಪಾಗಿ ನುಡಿದೆನಾ?

555
ಇಂದು ಉಡುಪಿ ಕೃಷ್ಣಿಗೆ ವಿಶ್ವರೂಪ ದರ್ಶನದ ಅಲಂಕಾರ ಮಾಡಿದ್ದಾರೆ. ಅದನ್ನು ನೋಡಿದಾಗ ನನಗೆ 55 ವರ್ಷದ ಹಿಂದೆ ನಾನು ಕಲಿತ ಶ್ಲೋಕ ಈಗ ನೆನಪಾಗುತ್ತಿದೆ. ಪಿತಾಸಿ ಲೋಕಸ್ಯ ಚರಾಚರಸ್ಯ, ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ । ನ ತ್ವತ್ಸಮೋऽಸ್ತ್ಯಭ್ಯಧಿಕಃ ಕುತೋऽನ್ಯೋ, ಲೋಕತ್ರಯೇऽಪ್ಯಪ್ರತಿಮಪ್ರಭಾವಃ ॥ ಎಂದು ಸಂಸ್ಕೃತ ಶ್ಲೋಕವನ್ನು ನಿರರ್ಗಳವಾಗಿ ನುಡಿದ ಡಿಕೆಶಿ, ಗುರುಗಳೇ, ನಾನು ತಪ್ಪೇನಾದರೂ ಹೇಳಿದ್ದೇನಾ ಎಂದು ಪುತ್ತಿಗೆ ಶ್ರೀಗಳಲ್ಲಿ ಕೇಳಿದರು. ಅದಕ್ಕೆ ಸರಿಯಿದೆ ಎಂದು ಶ್ರೀಗಳು ಪ್ರತಿಕ್ರಿಯಿಸಿದಾಗ, ಅಬ್ಬ. ಸರಿಯಾಗಿದೆ ಎಂದರೆ ಚಿಂತೆಯಿಲ್ಲ. ಮತ್ತೆ ನನ್ನ ಶ್ಲೋಕದಲ್ಲೂ ತಪ್ಪು ಹುಡುಕಬಾರದಲ್ಲ ಅದಕ್ಕೆ ಕೇಳಿದೆ ಎಂದು ಮಾರ್ಮಿಕವಾಗಿ ನುಡಿದರು.

ಹೇಗೆ ಬೇಕಾದರೂ ನನ್ನನ್ನು ಬಳಸಿಕೊಳ್ಳಿ

666
ನನ್ನನ್ನು ಬಂಡೆ ಎಂದು ಹೊಗಳಿದ್ದೀರಿ. ಕಲ್ಲು ಪ್ರಕೃತಿ. ಅದನ್ನು ಕಡಿದರೆ ಆಕೃತಿ. ಪೂಜಿಸಿದರೆ ಸಂಸ್ಕೃತಿ. ಯಾವುದು ಬೇಕೋ ಅದನ್ನು ಮಾಡಿಕೊಳ್ಳಿ. ಗುರುಗಳು ನನ್ನನ್ನು ಕನಕಪುರದ ರಾಕ್​ ಸ್ಟಾರ್​ ಎಂದಿದ್ದಾರೆ. ಹೀಗಾಗಿ ನನ್ನನ್ನು ಮೆಟ್ಟಿಲು ಮಾಡಿಕೊಳ್ಳಬಹುದು, ಜಲ್ಲಿ ಮಾಡಿಕೊಳ್ಳಬಹುದು. ವಿಗ್ರಹ ಮಾಡಿಕೊಳ್ಳಬಹುದು. ಹೇಗೆ ಬೇಕಾದರೂ ನನ್ನನ್ನು ಬಳಸಿ. ನನಗೆ ಎಲ್ಲರೂ ಆಶೀರ್ವದಿಸಿ, ಸಹಕರಿಸಿ. ಸಮಯ, ಮಾತು, ನಂಬಿಕೆ ಮತ್ತು ಅವಕಾಶ ಈ ನಾಲ್ಕು ಸಂಗತಿ ಅನುಸರಿಸೋಣ ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.

ಧರ್ಮ, ಪೂಜೆ, ಭಕ್ತಿ ಇವು ಪ್ರದರ್ಶನಕ್ಕೆ ಇರುವ ವಸ್ತುಗಳಲ್ಲ. ನಮ್ಮ ಆಚಾರ-ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾಧನೆಯ ಹಂತ ತಲುಪಲು ನಮ್ಮದೇ ಆದ ಹೊಸ ಮಾರ್ಗ ಕಂಡುಕೊಳ್ಳಬೇಕು. ಪ್ರಯತ್ನ ವಿಫಲವಾಗಬಹುದು. ಆದರೆ, ದೇವರಲ್ಲಿ ಮಾಡಿಕೊಂಡ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. | ಡಿ.ಕೆ. ಶಿವಕುಮಾರ. ಡಿಸಿಎಂ

ಅಪರೂಪದ ರಾಜಕಾರಣಿ ಶಿವಕುಮಾರ

DK 4
ಆಸ್ತಿಕ ರಾಜಕಾರಣಿಗಳು ಯಾರಾದರೂ ಇದ್ದರೆ ಅದು ಡಿ.ಕೆ. ಶಿವಕುಮಾರ ಅವರು ಮಾತ್ರ. ರಾಜಕಾರಣಿಗಳು ಆಸ್ತಿಕರಾದರೆ ದೇಶಕ್ಕೆ ಯಾವುದೇ ತೊಂದರೆಯಾಗದು. ಕೋಮು ಗಲಭೆಯೂ ನಡೆಯದು. ಕನಕಪುರದ ಬಂಡೆ ಖ್ಯಾತಿಯ ಶಿವಕುಮಾರ ಅವರು ರಾಕ್​ ಸ್ಟಾರ್​ ಆಗಿದ್ದಾರೆ. ದೇವರು, ಧರ್ಮದ ಬಗ್ಗೆ ಅಪಾರ ನಂಬಿಕೆಯುಳ್ಳ ಅಪರೂಪದ ರಾಜಕಾರಣಿಯಾಗಿದ್ದಾರೆ. ಅವರೂ ಸಹ ಗೀತಾ ಲೇಖನದ ದೀಕ್ಷೆ ಸ್ವೀಕರಿಸಿದ್ದಾರೆ. ಅದನ್ನು ಬರೆದು ಶ್ರೀಕೃಷ್ಣನಿಗೆ ಅರ್ಪಿಸಿದರೆ ಅವರ ಮನೋಕಾಮನೆ ಈಡೇರಲಿದೆ. ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ ಎಂದು ಸುಗುಣೇಂದ್ರ ಶ್ರೀಗಳು ಹರಸಿ, ಆಶೀರ್ವಾದ ಮಂತ್ರಾಕ್ಷತೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net