

ಬೆಂಗಳೂರು: ಮಹಾನಗರದ ಪ್ರಮುಖ ಆಮ್ಲಜನಕ ಉತ್ಪತ್ತಿಯ ತಾಣವಾಗಿರುವ ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಒದಗಿಸಲಾಗುವುದು. ನಗರದ ಇತರೆಡೆಯೂ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ರೀತಿ ಸಸ್ಯೋದಾನವನ್ನು ನಿರ್ಮಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ನಡಿಗೆ ಭಾಗವಾಗಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ನಾಗರಿಕರೊಂದಿಗೆ ವಾಕಿಂಗ್ ಮಾಡಿ ಜನರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಲಾಲ್‌ಬಾಗ್ ಅಭಿವೃದ್ಧಿಗೆ 10 ಕೋಟಿ ರೂ. ನೀಡಿರುವಂತೆ ಕಬ್ಬನ್ ಪಾರ್ಕ್ ಉದ್ಯಾನ ಉನ್ನತೀಕರಣಕ್ಕೂ, ಬಿಡಿಎಯಿಂದ 5 ಕೋಟಿ ರೂ. ಒದಗಿಸಲಾಗುವುದು. ಉಳಿದ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ಒದಗಿಸಲಾಗುವುದು. ಇನ್ನು ಮುಂದೆ ಈ ಉದ್ಯಾನದೊಳಗೆ ಯಾವುದೇ ರೀತಿಯ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಅವಕಾಶ ನೀಡದು. ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್ ಕರ್ನಾಟಕ ಹಾಗೂ ಭಾರತದ ಹೆಗ್ಗುರುತಾಗಿದ್ದು, ಇವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾಗ್ದಾನ ನೀಡಿದರು.
ಹೊಸ ‘ಟ್ರೀ ಪಾರ್ಕ್’ ಸ್ಥಾಪನೆ:
ಕಬ್ಬನ್ ಪಾರ್ಕ್ ಹಾಗೂ ಲಾಲ್ಬಾಗ್ ಮಾದರಿಯಲ್ಲಿ ನಗರದ ಇತರೆಡೆಯೂ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ‘ಟ್ರೀ ಪಾರ್ಕ್’ ಜಾರಿಗೆ ನಿರ್ಧರಿಸಲಾಗಿದೆ. ಇಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇದರಿಂದ ಕಾಡಿನ ಸಂರಕ್ಷಣೆಯೂ ಆಗಲಿದೆ. ಈ ವಿಚಾರವಾಗಿ ಅರಣ್ಯ ಇಲಾಖೆಯ ಜತೆ ಚರ್ಚಿಸಿ ನಗರದ ಹಲವೆಡೆ ಫಾರೆಸ್ಟ್ ಲ್ಯಾಂಡ್ ಅನ್ನು ಮರಗಳನ್ನು ಬೆಳೆಸಲು ಮೀಸಲಿರಿಸುವುದಾಗಿ ತಿಳಿಸಿದರು.
ದೂರುಗಳ ಸುರಿಮಳೆ:
ಡಿಸಿಎಂ ನಡೆಸಿದ ಸಂವಾದದ ವೇಳೆ ನಾಗರಿಕರಿಂದ ಹಲವು ದೂರುಗಳು ಕೇಳಿಬಂದವು. ಬೀದಿ ದೀಪ ಅವ್ಯವಸ್ಥೆ, ಪಾದಚಾರಿ ಮೇಲ್ಸೆತುವೆ ಸಮಸ್ಯೆ, ಬೀದಿ ನಾಯಿ ಸಮಸ್ಯೆ, ಹಳೆಯ ಮರ/ಕೊಂಬೆ ತೆರವುಗೊಳಿಸದಿರುವುದು, ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೀದಿ ದೀಪಗಳ ಅಭಾವ, ಖಾಸಗಿ ಬಸ್‌ಗಳ ಹಾವಳಿ ಬಗ್ಗೆ ಜನರು ದೂರು ನೀಡಿದರು. ಇಂದಿರಾಗಾಂಧಿ ಮಕ್ಕಳ ಗ್ರಂಥಾಲಯದ ಉನ್ನತೀಕರಣ ಹಾಗೂ ಆಯುರ್ವೇದ ಉದ್ಯಾನ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು. ಹೈಕೋರ್ಟ್ ಸುತ್ತಲು ಪಾರ್ಕಿಂಗ್, ಸಸದ ಸಮಸ್ಯೆ ಹೆಚ್ಚಿದೆ ಎಂಬ ಆಕ್ಷೇಪ ವ್ಯಕ್ತವಾಯಿತು. ಈ ಎಲ್ಲ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲಾಗುವುದು ಎಂದು ಡಿಸಿಎಂ ಅಭಯ ನೀಡಿದರು.
ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಶಾಸಕ ರಿಜ್ವಾನ್ ಅರ್ಷದ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಹಾಗೂ ಇತರರು ಹಾಜರಿದ್ದರು.
ಟನಲ್‌ಗೆ ಪರ್ಯಾಯ ವ್ಯವಸ್ಥೆ ಏನು?:
ರಾಜಧಾನಿಯಲ್ಲಿ ಸಂಚಾರ ಸಿಕ್ಕು ನಿವಾರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಟನಲ್ ರಸ್ತೆಯೂ ಒಂದಾಗಿದ್ದು, ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಪ್ರಾಜೆಕ್ಟ್ ಬಗ್ಗೆ ಅನೇಕ ನಾಗರಿಕರು ಸಹಮತ ವ್ಯಕ್ತಪಡಿಸಿದ್ದರೆ, ಸಂಸದ ತೇಜಸ್ವಿ ಸೂರ್ಯ ಮಾತ್ರ ವಿರೋಧಿಸುತ್ತಿದ್ದಾರೆ. ಯೋಜನೆ ಬೇಡವೆಂದರೆ ಪರ್ಯಾಯ ಏನು ಎಂಬುದನ್ನು ತಿಳಿಸಬೇಕು. ಈ ಕೆಲಸ ಮಾಡದೆ ಸಂಸದರು ಟೀಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ವಿಚಾರವಾಗಿ ಮಂಗಳವಾರ (ಅ.28) ತಮ್ಮನ್ನು ಭೇಟಿ ಮಾಡಲು ಸಮಯ ನೀಡಿದ್ದೇನೆ. ಅವರ ಸಲಹೆ ಸೂಕ್ತವಾಗಿದ್ದರೆ ಸ್ವೀಕರಿಸಲಾಗುವುದು ಎಂದು ಡಿಸಿಎಂ ಪ್ರತಿಕ್ರಿಯಿಸಿದರು.
ರೆಡ್ ಲೈನ್, ಕೇಂದ್ರ ಸಚಿವರಿಗೆ ಮನವಿ:
ನಮ್ಮ ಮೆಟ್ರೋ ರೆಡ್ ಲೈನ್ ಮಾರ್ಗಕ್ಕೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಈಗ ಮತ್ತೊಮ್ಮೆ ಬಿಎಮ್ಆರ್ಸಿಎಲ್ನಿಂದ ಡಿಪಿಆರ್ ತಯಾರಿಸಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಜನಗಳ ಅನುಕೂಲಕ್ಕಾಗಿ ಈ ಮಾರ್ಗ ವಿಸ್ತರಣೆ ಅಗತ್ಯವಿದ್ದು, ಡಬಲ್ ಡೆಕ್ಕರ್ ಸಹ ಮಾಡಬೇಕಿದೆ. ಈ ವಿಚಾರವಾಗಿ ಕೇಂದ್ರ ಸಚಿವರು ಅ.30ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಆಗ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ನಾನು ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿಗೆ ಕಬ್ಬನ್ ಪಾರ್ಕ್ ತೋರಿಸಲು ಆಕೆಯನ್ನು ಕರೆದುಕೊಂಡು ಬಂದಿದ್ದೆ. ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಇಲ್ಲಿಗೆ ಬಂದು ಸಮಯ ಕಳೆಯುತ್ತಿದ್ದೆವು. ಹಾಗಾಗಿ ಕಬ್ಬನ್ ಪಾರ್ಕ್ ಬಗ್ಗೆ ನಮಗೆ ಹಿಂದಿನಿಂದಲೂ ಅವಿನಾಭಾವ ಸಂಬಂಧ ಇದೆ ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು.