ಸಂಪೂರ್ಣ ಸೋಂಕು ನಿರ್ಮೂಲನೆ ಗುರಿ : ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

18-05-rama-dcm
Published on

ರಾಮನಗರ : ಸೋಂಕಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋಂ ಐಸೋಲೇಷನ್ ಪದ್ಧತಿ ಕೈಬಿಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಆಕ್ಸಿಜನೇಟೆಡ್ ಹಾಸಿಗೆಗಳನ್ನು ಮಂಗಳವಾರ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೋಂಕನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ನಮ್ಮ ಮುಂದಿರುವ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಮನಗರದಲ್ಲಿ ಹೆಚ್ಚುವರಿಯಾಗಿ ಹೊಸ ಆಸ್ಪತ್ರೆಯಲ್ಲಿ 131 ಆಕ್ಸಿಜನೇಟೆಡ್ ಬೆಡ್‌ಗಳು, ಕಂದಾಯ ಭವನದಲ್ಲಿ 130ರಿಂದ 150 ಬೆಡ್‌ಗಳನ್ನು ಮುಂದಿನ 15 ದಿನಗಳಲ್ಲಿ ಅಳವಡಿಸಲಾಗುತ್ತಿದೆ.

ರಾಮನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದವನ್ನು ಕೋವಿಡ್ ಕೇರ್ ಸೆಂಟರ್ ಮಾಡಿ ಆರೈಕೆ ಮಾಡಲಾಗುತ್ತದೆ. ಜತೆಗೆ 100 ಐಸಿಯು ಬೆಡ್ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ರಾಮನಗರ ಜಿಲ್ಲೆಗೆ 6.8 ಮೆಟ್ರಿಕ್ ಟನ್ ಆಕ್ಸಿಜನ್ ಮಂಜೂರಾಗಿದ್ದು, ಇದರಲ್ಲಿ ಕೇವಲ 3.5 ಕೆಎಲ್ ಮಾತ್ರ ಬಳಕೆ ಆಗುತ್ತಿದೆ. ಉಳಿದಿದ್ದನ್ನು ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಪ್ರತಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿಯೂ ಆಕ್ಸಿಜನ್ ಜನರೇಟರ್ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಸ್ವಯಂ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ ಎಂದರು. ಅದೇ ರೀತಿ ರಾಜ್ಯದಲ್ಲಿಯೂ 60 ಸಾವಿರ ಆಕ್ಸಿಜನ್ ಬೆಡ್‌ಗಳು ಇದ್ದು, ಇವುಗಳಲ್ಲಿ 30 ಸಾವಿರ ಬೆಂಗಳೂರಿನಲ್ಲಿಯೇ ಇವೆ. ಸಣ್ಣ ಆಸ್ಪತ್ರೆಗೂ ಸಹ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ರಾಜಕೀಯ ಬಿಡಿ : ವಿರೋಧ ಪಕ್ಷಗಳಿಗೆ ಈಗ ನಮ್ಮ ಮೇಲೆ ಆರೋಪ ಮಾಡಲು ಏನೂ ಇಲ್ಲ, ಇದಕ್ಕಾಗಿ ಕೋವಿಡ್ ವಿಚಾರ ಮುಂದಿಟ್ಟುಕೊಂಡು ಪ್ರತಿದಿನ ಆರೋಪ ಮಾಡುತ್ತಿವೆೆ. ಆದರೆ ನಾವು ಶಕ್ತಿ ಮೀರಿ ಪ್ರತಿಯೊಬ್ಬ ರೋಗಿಗೆ ಔಷಧ ಸೇರಿ ಎಲ್ಲವನ್ನೂ ನೀಡುತ್ತಾ ಬಂದಿದ್ದೇವೆ. ಕರೊನಾಗಿಂತ ಮೊದಲು ಕೇವಲ 150-200 ಮೆಟ್ರಿಕ್ ಟನ್ ಇದ್ದ ಆಮ್ಲಜನಕ ಬಳಕೆ, ಈಗ ಸಾವಿರ ಮೆಟ್ರಿಕ್ ಟನ್ ದಾಟಿದೆ, ಇದನ್ನು ಕೊಡುವ ಕೆಲಸ ಸರ್ಕಾರದಿಂದ ಆಗಿದೆ. ಪರೀಕ್ಷೆ ಪ್ರಮಾಣವೂ ಕಡಿಮೆ ಆಗಿಲ್ಲ. ಮೊದಲು ರಾಮನಗರದಲ್ಲಿ 1500 ಪರೀಕ್ಷೆಗಳು ನಡೆಯುತ್ತಿತ್ತು, ಈಗಲೂ ಅಷ್ಟೇ ನಡೆಯುತ್ತಿದೆ, ಪರೀಕ್ಷಾ ವರದಿ ಕೇವಲ 24 ಗಂಟೆಯಲ್ಲಿ ಕೈಸೇರುವಂತೆ ಆಗಿದೆ, ರ‌್ಯಾಟ್ ಪರೀಕ್ಷೆಯನ್ನು ಶೇ.30ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, 60 ವರ್ಷ ದೇಶವನ್ನು ಆಳಿದ ಪಕ್ಷ ಎಂಪಿ, ಎಂಎಲ್‌ಎ ಲಾಡ್ ಹಣವನ್ನು ಲಸಿಕೆ ಖರೀದಿಗೆ ಬಳಸಿಕೊಳ್ಳಲು ಅನುಮತಿ ಕೊಡಿ ಎಂದು ಹೇಳುವ ಮೂಲಕ ಲಸಿಕೆ ರಾಜಕಾರಣ ಮಾಡಲು ಹೊರಟಿದೆ ಎಂದು ಟೀಕಿಸಿದರು. ಲಸಿಕೆ ನೀಡಿದ ವೇಳೆ ಅಪಪ್ರಚಾರ ನಡೆಯಿತು. ನಂತರ ಒಮ್ಮೆಲೆ ಬೇಡಿಕೆ ಹೆಚ್ಚಿತು. ಕಂಪನಿಗಳು ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಲಸಿಕೆ ಉತ್ಪಾದಿಸುತ್ತಿವೆ. ಆಗಸ್ಟ್ ವೇಳೆಗೆ ದೇಶದಲ್ಲಿ 40 ಕೋಟಿ ಡೋಸ್ ಲಸಿಕೆ ಉತ್ಪಾದನೆ ಅಲ್ಲದೆ, ಈಗಾಗಲೇ ದೇಶದ ಸುಮಾರು 19 ಕೋಟಿ ಜನರಿಗೆ ಲಸಿಕೆ ಹಾಕಲಾಗಿದ್ದು, ಇದು ಪ್ರಪಂಚದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನಡೆದ ಅಭಿಯಾನವಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕಾಂಗ್ರೆಸ್‌ಗೆ ಸವಾಲು : 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಷ್ಟು ಜನ ವೈದ್ಯರು, ಆಸ್ಪತ್ರೆಗಳು, ವೈದ್ಯಕೀಯ ಮೂಲಸೌಲಭ್ಯ ಒದಗಿಸಿದೆ. ನಾವು ಏನು ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಚಿಕಿತ್ಸೆ, ಲಸಿಕೆ, ಸಾವಿನ ಪ್ರಮಾಣ ಹೀಗೆ ಎಲ್ಲವನ್ನೂ ಅಂಕಿ ಅಂಶಗಳ ಸಮೇತ ಒದಗಿಸುತ್ತೇವೆ. ಅವರೂ ತಮ್ಮ ಸಾಧನೆಯನ್ನು ತೋರಿಸಲಿ ಎಂದು ಡಿಸಿಎಂ ಅಶ್ವತ್ಥನಾರಾಯಣ ಸವಾಲು ಹಾಕಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಇಕ್ರಂ, ಡಿಎಚ್‌ಒ ಡಾ. ಬಿ.ಎಸ್. ನಿರಂಜನ್, ಆರ್‌ಸಿಎಚ್‌ಒ ಡಾ. ಜಿ.ಎಲ್. ಪದ್ಮಾ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net