

ತುಮಕೂರು: ಮಂಗಳೂರು ಗಲಭೆ ವಿಷಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಜವಾಬ್ದಾರಿಯಿಂದ ಮಾತನಾಡುತ್ತಿರುವುದು ಅಸಹನೀಯ ಎಂದು ಡಿಸಿಎಂ ಅಶ್ವತ್ಥನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಮಧ್ಯಾಹ್ನ ತುಮಕೂರು ವಿವಿಗೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲ ವಿಷಯದಲ್ಲಿಯೂ ರಾಜಕೀಯ ಮಾಡಿದರೆ ದೇಶದಲ್ಲಿ ಗೊಂದಲ ಉಂಟಾಗಲಿದೆ ಎಂದರು.
ದೇಶದ ಕಾನೂನು ಎಲ್ಲರೂ ಗೌರವಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಆದರೆ, ಒಂದು ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಸಚಿವ ಸಂಪುಟ ವಿಸ್ತರಣೆ ಸಂಪೂರ್ಣ ಸಿಎಂ ವಿವೇಚನೆಯ ವಿಷಯವಾಗಿದ್ದು, ನಾವು ಅವರ ಸೂಚನೆ ಪಾಲಿಸುತ್ತೇವೆ, ಪ್ರಸ್ತುತ ಸಿಎಂ ಬಿಎಸ್‌ವೈ ವಿದೇಶ ಪ್ರವಾಸದಲ್ಲಿದ್ದು, ವಾಪಸಾದ ನಂತರ ಸಚಿವ ಸಂಪುಟ ವಿಸ್ತರಿಸಬಹುದು ಎಂದರು.
ಡಿಸಿಎಂ ಸ್ಥಾನ ಉಳಿಸಿಕೊಳ್ಳುವ ಅಥವಾ ತೆಗೆಯುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಈ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ, ಸಿಎಎ ವಿರೋಧ ಸೇರಿ ಕೆಲವು ಕಾರಣಗಳಿಂದ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದರು. ಭೇಟಿ ಸವಿ ನೆನಪಿಗಾಗಿ ಡಿಸಿಎಂ, ವಿವಿ ಆವರಣದಲ್ಲಿ ಗಿಡನೆಟ್ಟು ನೀರುಣಿಸಿದರು. ಕುಲಪತಿ ಸಭಾಂಗಣದಲ್ಲಿ ಅಧಿಕಾರಿಗಳಿಂದ ವಿವಿ ಆಡಳಿತ, ಹೊಸಕ್ಯಾಂಪಸ್ ‘ಜ್ಞಾನಸಿರಿ’ ನಿರ್ಮಾಣದ ಬಗ್ಗೆಯೂ ಮಾಹಿತಿ ಪಡೆದು, ಕೆಲವು ಸೂಚನೆ ನೀಡಿದರು.
ಸಿದ್ಧಗಂಗಾ ಮಠಕ್ಕೆ ಭೇಟಿ: ತುಮಕೂರು ವಿವಿ ಭೇಟಿಯ ನಂತರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸಿದ್ಧಗಂಗಾ ಮಠ, ಸರ್ಕಾರಿ ಮಹಿಳಾ ಪದವಿ ಕಾಲೇಜಿಗೂ ಭೇಟಿ ನೀಡಿದ ಡಿಸಿಎಂ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಭರವಸೆ ನೀಡಿದರು. ಸರ್ಕಾರಿ ಮಹಿಳಾ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ನೀಡುವ ಬಗ್ಗೆ ಶಾಸಕ ಜ್ಯೋತಿಗಣೇಶ್ ಮನವಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸರ್ಕಾರ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಕ್ರಮಕೈಗೊಂಡಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ನೈತಿಕ ಸ್ಥೈರ್ಯ ಕುಗ್ಗಿಸುವ ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆ ಸರಿಯಾಗಿಲ್ಲ. ಅಶ್ವತ್ಥನಾರಾಯಣ ಡಿಸಿಎಂ