

ಕೊಳ್ಳೇಗಾಲ: ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯ ನಾಯಕರ ದೊಡ್ಡ ಬೀದಿಯಲ್ಲಿರುವ ಸಂಖ್ಯೆ 15, ಅಸೆಸ್‌ಮೆಂಟ್ ನಂ. 472ಕ್ಕೆ ಸಂಬಂಧಿಸಿದಂತೆ ವಾರಸುದಾರ ಲೇಟ್ ಶಿವರಾಮು ಪುತ್ರ ಎಸ್.ಲೋಕೇಶ್ ಅವರ ಮನವಿಯನ್ನು ಪರಿಶೀಲಿಸಿ ನಿಯಮಾನುಸರ ಕ್ರಮವಹಿಸುವಂತೆ ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಉಪ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಪತ್ರ ಬರೆದು ಸೂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಫೆ.6 ರಂದು ಕೊಳ್ಳೇಗಾಲ ನಗರಸಭೆ ಆಯುಕ್ತ ರಮೇಶ್ ಅವರಿಗೆ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಲಿಖಿತ ಪತ್ರ ನೀಡಿದ್ದಾರೆ. ಪತ್ರದಲ್ಲಿ ಪಟ್ಟಣದ ಉಪ್ಪಾರಮೋಳೆ ಬಡಾವಣೆಯ ಎಸ್.ಲೋಕೇಶ್ ಅವರು ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯ ನಾಯಕರ ದೊಡ್ಡ ಬೀದಿಯಲ್ಲಿರುವ ಸಂಖ್ಯೆ 15, ಅಸೆಸ್‌ಮೆಂಟ್ ನಂ.472ರಲ್ಲಿ ಪೂರ್ವ-ಪಶ್ಚಿಮ 33 ಅಡಿ, ಉತ್ತರ-ದಕ್ಷಿಣ 47 ಅಡಿ ವಿಸ್ತೀರ್ಣದ ನಿವೇಶನದ ಮಾಲೀಕರಾಗಿದ್ದಾರೆ.
ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್ ಅವರು ಕಾನೂನು ಬಾಹಿರವಾಗಿ ಸದರಿಯವರ ಖಾಲಿ ನಿವೇಶನದ ಮೇಲೆ ರಸ್ತೆ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಸೈಟಿನ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ದಾವೆ ಹೂಡಿದ್ದು, ನಗರಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿವೇಶನಗಳಿಗೆ ಸಂಬಂಧಿಸಿದಂತೆ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಾಲಯದ ಆದೇಶ ನೀಡಿದೆ. ಆದರೂ ಕಾಮಗಾರಿಯನ್ನು ಕೈಗೊಂಡಿರುತ್ತಾರೆ. ತಹಸೀಲ್ದಾರ್ ಮತ್ತು ಎ.ಡಿ.ಎಲ್.ಆರ್ ಸಿಬ್ಬಂದಿ ಸರ್ವೇ ಮಾಡಿದಾಗ ಕುಪ್ಪಮ್ಮ ಕಾಲುವೆಯ ಪಶ್ಚಿಮ ಭಾಗಕ್ಕೆ ಸರ್ಕಾರಿ ಜಾಗವು ಒತ್ತುವರಿಯಾಗಿರುವುದು ಕಂಡು ಬಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕುಪ್ಪಮ್ಮ ಕಾಲುವೆಯ ಪಶ್ಚಿಮ ಭಾಗದಲ್ಲಿ ರಸ್ತೆ ಕಾಮಗಾರಿಗೆ ಮಾಡಲು ಸರ್ಕಾರಿ ಜಾಗವಿದ್ದು, ಅಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಖಾಸಗಿ ನಿವೇಶನಗಳ ಮೇಲೆ ಅಕ್ರಮವಾಗಿ ಮಾಡುತ್ತಿರುವ ರಸ್ತೆ ಕಾಮಗಾರಿಯನ್ನು ಮುಂದುವರೆಸದಂತೆ ನಿಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ವಿನಂತಿಸಿ ಕೊಂಡಿರುತ್ತಾರೆ. ಈ ಹಿನ್ನ ಲೋಕೇಶ್ ಅವರ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಉಪ ಮುಖ್ಯಮಂತ್ರಿಗಳಿಂದ ನಿರ್ದೇಶಿತನಾಗಿದ್ದೇನೆ ಎಂದು ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಬಿ.ಎಸ್.ಶ್ರೀಧರ್ ಅವರು ಪತ್ರ ಬರೆದಿದ್ದಾರೆ.