ಪೊಲೀಸ್ ಸಿಬ್ಬಂದಿ ಪ್ರವಾಸ ಭತ್ಯೆ ವಂಚಿಸಿರುವ ಮಹಿಳಾ ಎಫ್‌ಡಿಎ ಪತ್ತೆಗೆ ಮುಂದಾದ ಜಿಲ್ಲಾ ಅಪರಾಧ ಪತ್ತೆ ದಳ

tumkur-sp-office1594565809
Published on

ತುಮಕೂರು: ಪೊಲೀಸ್ ಸಿಬ್ಬಂದಿ ಪ್ರವಾಸ ಭತ್ಯೆ ವಂಚಿಸಿರುವ ಪ್ರಮುಖ ಆರೋಪಿ ತಲೆಮರೆಸಿಕೊಂಡಿರುವುದು ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಬಹುದೊಡ್ಡ ವಂಚನೆ ನಡೆದಿರುವುದರಿಂದ ಬಹಳ ರಹಸ್ಯವಾಗಿ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಸುದ್ದಿ ‘ವಿಜಯವಾಣಿ’ಯಲ್ಲಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಅಪರಾಧ ಪತ್ತೆ ದಳವು (ಡಿಸಿಐಬಿ) ಆರೋಪಿ ಎಫ್‌ಡಿಎ ಯಶಸ್ವಿನಿ ಪತ್ತೆಗೆ ಕಾರ್ಯಪ್ರವೃತ್ತವಾಗಿದೆ.

ಎಫ್‌ಡಿಎ ನಾಪತ್ತೆ: 2020ರ ಜನವರಿ ತಿಂಗಳಿನಲ್ಲಿ 18 ಪೊಲೀಸರ ಪ್ರವಾಸ ಭತ್ಯೆಯ ಹೆಚ್ಚುವರಿ ಬಿಲ್ ತಯಾರಿಸಿ 20,50,970 ರೂಪಾಯಿ ಜಿಲ್ಲಾ ಖಜಾನೆಗೆ ಸಲ್ಲಿಸಿ ಈ ಹೆಚ್ಚುವರಿ ಮೊತ್ತವನ್ನು ಪೊಲೀಸರಿಂದ ಸ್ವಂತ ಖಾತೆಗೆ ಗೂಗಲ್ ಪೇ ಮಾಡಿಸಿಕೊಂಡು ಎಫ್‌ಡಿಎ ಯಶಸ್ವಿನಿ ಸರ್ಕಾರಕ್ಕೆ ವಂಚಿಸಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಫ್‌ಡಿಎ ಅನ್ನು ಅಮಾನತಿನಲ್ಲಿಟ್ಟು ಇಲಾಖೆ ತನಿಖೆಗೆ ಸಹ ಆದೇಶಿಸಲಾಗಿತ್ತು. ಎಫ್‌ಡಿಎ ಬಳಿ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಮರುಪಾವತಿಸಿ ಪ್ರಕರಣವನ್ನು ಇಲಾಖೆ ಹಂತದಲ್ಲೇ ಮುಚ್ಚಿಹಾಕುವ ಪ್ರಯತ್ನ ಕೂಡ ನಡೆದಿತ್ತು ಎನ್ನಲಾಗಿದೆ.

ಈ ಪ್ರಕರಣವು ಮಾಧ್ಯಮದವರ ಕಿವಿಗೆ ಬಿದ್ದಿರುವುದು ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎಎಒ 3 ತಿಂಗಳ ಬಳಿಕ ಹೊಸ ಬಡಾವಣೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಆರೋಪಿ ಯಶಸ್ವಿನಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.

ಈ ವೇಳೆ ಆರೋಪಿ ಪರ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಡಿಸೆಂಬರ್ 30 ರಂದು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ನಿರಾಕರಿಸಿತ್ತು. ಅಲ್ಲದೇ ನ್ಯಾಯಾಧೀಶರಾದ ಜಿ.ಎಸ್. ದೇಶಪಾಂಡೆ ಅವರು ಎಸ್ಪಿ ಕಚೇರಿಯಲ್ಲೇ ಸೇವೆ ಸಲ್ಲಿಸಿದವರನ್ನು ಬಂಧಿಸಲಾಗದಿದ್ದರೆ ಸಾಮಾನ್ಯ ಜನರಿಗೆ ಹೇಗೆ ನ್ಯಾಯ ದೊರಕಿಸಿಕೊಡುವಿರಿ ಎಂದು ಅಸಮಾಧಾನ ಹೊರಹಾಕಿದ್ದರು.

ಎಫ್‌ಡಿಎ ತಲೆಮರೆಸಿಕೊಂಡಿರುವ ಹಿಂದೆ ಇಲಾಖೆ ಸಿಬ್ಬಂದಿಯೇ ಇದ್ದಾರೆಂಬ ಸಣ್ಣ ಗುಮಾನಿಗಳಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಈಗ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಯಶಸ್ವಿನಿ ಪತ್ತೆಗೆ ಬಲೆಬೀಸಿದ್ದಾರೆ.

ಪೊಲೀಸರ ಪ್ರವಾಸ ಭತ್ಯೆ ವಂಚನೆ ಪ್ರಕರಣದ ಆರೋಪಿ ಎಫ್‌ಡಿಎ ಯಶಸ್ವಿನಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಎಲ್ಲೇ ತಲೆಮರೆಸಿಕೊಂಡಿದ್ದರೂ ಪತ್ತೆ ಹಚ್ಚಲಾಗುವುದು. ಅವರ ಬಳಿಯಿಂದ ನೂರಕ್ಕೆ ನೂರರಷ್ಟು ಹಣ ವಸೂಲಿ ಮಾಡಿ ಸರ್ಕಾರಕ್ಕೆ ಮರುಪಾವತಿಸಲಾಗುವುದು. ಡಾ.ಕೆ.ವಂಶಿಕೃಷ್ಣ ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net