

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಮುನ್ನುಡಿಯಂತಿರುವ ‘ಗಜಪಯಣ’ದ ಸಿದ್ಧತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ.
ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕೇಂದ್ರಕ್ಕೆ ಭೇಟಿ ನೀಡಿ ಗಜಪಯಣ ಸಿದ್ಧತೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆಗಸ್ಟ್ 21 ರಂದು ಗಜಪಯಣ ನಡೆಯಲಿದ್ದು, ವೇದಿಕೆ ಇನ್ನಿತರ ಸಿದ್ಧತಾ ಕಾರ್ಯಗಳು ಶುಕ್ರವಾರದಿಂದ ಆರಂಭವಾಗಲಿವೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ವೇದಿಕೆ ನಿರ್ಮಾಣ, ಗಜಪಡೆಗೆ ಗಣ್ಯರ ಪುಷ್ಪಾರ್ಚನೆ ಮಾಡುವ ಸ್ಥಳದ ಸಿದ್ಧತೆ ಸಂಬಂಧ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ.
ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರನಹೊಸಳ್ಳಿಯ ವಲಯ ಕಚೇರಿ ಬಳಿ (ಸಫಾರಿ ಕೌಂಟರ್ ಮುಂಭಾಗ) ಗಜಪಯಣಕ್ಕೆ ಚಾಲನೆ ದೊರೆಯಲಿದ್ದು, ಗಣ್ಯರು ಗಜಪಡೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜತೆಗೆ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ವೇದಿಕೆ ನಿರ್ಮಾಣ ಮಾಡಲು ತಿಳಿಸಲಾಗಿದೆ. ಈ ಬಾರಿ ಮಳೆಯಾಗುತ್ತಿರುವ ಕಾರಣ ವೇದಿಕೆಯಲ್ಲಿ ಜರ್ಮನ್ ಟೆಂಟ್ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಆರ್‌ಎಫ್‌ಒಗಳಾದ ಸಂತೋಷ್ ಹೂಗಾರ್, ಅಭಿಷೇಕ್ ಇತರರಿದ್ದರು.
ಆಗಸ್ಟ್ 21 ರಂದು ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸಲಿವೆ.