ಡಿಸಿಸಿ ಬ್ಯಾಂಕ್ ಚುನಾವಣೆಗೆ ಶಾಸಕರ ಸ್ಪರ್ಧೆ; ಜಾರಕಿಹೊಳಿ ಬೇಸರ

IMG-20250731-WA0015.jpg
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಶಾಸಕರೆಲ್ಲರೂ ಏಕೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನೇ ಕೇಳಿ ತಿಳಿದುಕೊಳ್ಳಬೇಕಾಗಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು ಎರಡನೇ ಹಂತದ ನಾಯಕರನ್ನು ಕಣಕ್ಕಿಳಿಸಿ ಬೆಳಸಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ, ಜಾರಕಿಹೊಳಿ ಕುಟುಂಬದಿಂದ ಯಾರು ಸ್ಪರ್ಧಿಸುವುದಿಲ್ಲ. ನಾವ್ಯಾರು ಅಧ್ಯಕ್ಷ, ಉಪಾಧ್ಯಕ್ಷರು ಆಗುವುದಿಲ್ಲ. ರಾಹುಲ ಜಾರಕಿಹೊಳಿ ಸ್ಪರ್ಧೆ ಖಚಿತ ಇಲ್ಲ. ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ್ನ ಮೀಸಲಿಟ್ಟಿದ್ದೇವೆ ಎಂದರು.

ಅಕ್ಟೋಬರ್ 19 ಬಿಡಿಸಿಸಿ ಆಡಳಿತ ಮಂಡಳಿಗೆ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ, ಶಾಸಕರಾದ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ. ಅಲ್ಲದೆ, ನಾವೆಲ್ಲಾ ತಂಡವಾಗಿ ಕೆಲಸ ಮಾಡುತ್ತಿದ್ದು, ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲವೇ ಇಲ್ಲ ಎಂದು ತಿಳಿಸಿದರು.

ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನ ನೀಡಲು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ 100 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದರು.

.......

ಬಾಕ್ಸ್

ಚನ್ನರಾಜ ಹಟ್ಟಿಹೊಳಿ ನಮ್ಮನ್ನು ಸಂಪರ್ಕಿಸಿಲ್ಲ

ಈ ಬಾರಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಖಾನಾಪುರದಿಂದ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಸುತ್ತಿರುವ ವಿಷಯ ಗೊತ್ತಿಲ್ಲ. ಅವರು ಕೂಡ ನಮ್ಮನ್ನು ಸಂಪರ್ಕಿಸಿಲ್ಲ. ರಾಮದುರ್ಗದಿಂದ ಅಭ್ಯರ್ಥಿಯನ್ನು ಆಗಸ್ಟ್‌ನಲ್ಲಿ ಘೋಷಣೆ ಮಾಡುತ್ತೇವೆ. ಶಾಸಕ ಅಶೋಕ ಪಟ್ಟಣ ಸ್ಪರ್ಧೆ ಮಾಡುವುದು ಕುರಿತು ಮಾಹಿತಿ ಬಂದಿದೆ. ಈ ಕುರಿತು ಅವರೊಂದಿಗೆ ಚರ್ಚಿಸುತ್ತೇವೆ. ಖಾನಾಪುರದಿಂದ ಮಾಜಿ ಅರವಿಂದ ಪಾಟೀಲ ಅವರ ಹೆಸರನ್ನು ಘೋಷಣೆ ಮಾಡಿದ್ದೇವೆ. ಕಿತ್ತೂರು, ಬೈಲಹೊಂಗಲ, ರಾಮದುರ್ಗ, ಸವದತ್ತಿ, ಗೋಕಾಕ, ಮೂಡಲಗಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಸ್ಥಳೀಯ ಮಟ್ಟದಲ್ಲಿ ಹಾಲಿ, ಮಾಜಿ ಶಾಸಕರು, ಮುಖಂಡರೊಂದಿಗೆ ಚರ್ಚಿಸಿ ಘೋಷಣೆ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

.............................

ಬಾಕ್ಸ್

ನಕಲಿ ಸೊಸೈಟಿಗಳ ಕುರಿತು ತನಿಖೆ

ಜಿಲ್ಲೆಯಲ್ಲಿ ನಕಲಿ ಸೊಸೈಟಿಗಳನ್ನು ಸ್ಥಾಪನೆ ಮಾಡಲು ಸಾಧ್ಯವೇ ಇಲ್ಲ.ಅಲ್ಲದೆ, ಚುನಾವಣೆಯಲ್ಲಿ ಮತಕ್ಕಾಗಿ ಸೊಸೈಟಿ ಸ್ಥಾಪನೆ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರದ ಮಾತು. ಇಂತಹ ಸೊಸೈಟಿಗಳ ಕುರಿತು ದೂರುಗಳು ಬಂದಿದ್ದೇರೆ ಡಿಸಿಸಿ ಬ್ಯಾಂಕ್ ತನಿಖೆ ನಡೆಸುತ್ತಾರೆ. ಕೆಲವರು ಆರೋಪ ಮಾಡಬಹುದು ತನಿಖೆಯ ಬಳಿಕೆವೇ ಸರಿ ತಪ್ಪು ಗೊತ್ತಾಗಲಿದೆ.ಹಣದ ಮೇಲೆ ಚುನಾವಣೆ ನಡೆಯುತ್ತಿದ್ದರೆ ಎಲ್ಲರೂ ಶಾಸಕರು, ಸಂಸದರು ಆಗುತ್ತಿದ್ದರು. ಜನರ ನಂಬಿಕೆ, ಸಂಘಟನೆ, ಪ್ರೀತಿ ವಿಶ್ವಾಸ ಇದ್ದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಹಣ ಪಡೆದು ಮತ ಹಾಕುತ್ತಾರೆ ಎಂದು ಹೇಳಿಕೆ ನೀಡಿ ಮತದಾರರಿಗೆ ಅವಮಾನ ಮಾಡಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿನಂತಿಸಿದರು.

.......................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net