

ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ನೂತನ ಅಧ್ಯಕ್ಷರಾಗಿ ಅಪ್ಪಾಸಾಹೇಬ ಎಂ. ಕುಲಗುಡೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಅಧ್ಯಕ್ಷರಾಗಿದ್ದ ರಮೇಶ ಕತ್ತಿ ಅವರು ಅಕ್ಟೋಬರ್ 5ರಂದು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಮತದಾನ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಕೆಗೂ ಮುನ್ನ ಖಾಸಗಿ ಹೋಟೆಲ್ಲಿನಲ್ಲಿ ನಿರ್ದೇಶಕರರೊಂದಿಗೆ ಚರ್ಚಿಸಿದ ಬಳಿಕಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ನಿರ್ದೇಶಕರಾದ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ರತ್ನಾ ಮಾಮನಿ ಕೂಡ ಇದ್ದರು.
ಸಭೆಯಲ್ಲಿ ರಾಯಬಾಗದ ಅಪ್ಪಾಸಾಹೇಬ ಕುಲಗುಡೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಅಪ್ಪಾಸಾಹೇಬ ಕುಲಗುಡೆ ಅವರೊಬ್ಬರೇ ನಾಮಪತ್ರ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸತೀಶ ತಿಳಿಸಿದರು.