

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಶತಮಾನಗಳ ಇತಿಹಾಸ ಹೊಂದಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಈ ಬಾರಿ ಪಕ್ಷಕ್ಕಿಂತ ಪ್ರತಿಷ್ಠೆಯೇ ಮಹತ್ವದ ಪಾತ್ರ ವಹಿಸಿದೆ. ಮತ್ತೊಂದೆಡೆ ಘಟಾನುಘಟಿ ರಾಜಕೀಯ ಶಕ್ತಿಗಳ ನಡುವೆ ಅಧಿಕಾರದ ಚುಕ್ಕಾಣಿಗೆ ಪೈಪೋಟಿ ಜೋರಾಗಿದೆ.
ಸಹಕಾರಿ ವಲಯದಲ್ಲಿ ಪಕ್ಷಾತೀತ, ವೈಯಕ್ತಿಕ ಪ್ರತಿಷ್ಠೆ, ಹೊಂದಾಣಿಕೆ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಹಾಗೂ ರಾಜ್ಯ ರಾಜಕೀಯ ಕೇಂದ್ರ ಬಿಂದುವಾಗಿರುವ ಬೆಳಗಾವಿ ಜಿಲ್ಲೆಯ ಬಹುತೇಕ ರಾಜಕಾರಣಿಗಳು ತಮ್ಮ ರಾಜಕೀಯ ಬದುಕನ್ನು ಸಹಕಾರಿ ಕ್ಷೇತ್ರದಿಂದಲೇ ಆರಂಭಿಸಿದ್ದಾರೆ. ಹೀಗಾಗಿಯೇ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ 16 ನಿರ್ದೇಶಕ ಸ್ಥಾನಗಳ ಚುನಾವಣೆ ಮಹತ್ವ ಪಡೆದುಕೊಂಡಿದೆ. ಬಿಡಿಸಿಸಿ ಬ್ಯಾಂಕ್‌ನ 16 ನಿರ್ದೇಶಕ ಸ್ಥಾನಗಳಿಗೆ ಇದೇ ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದ್ದು, ಹಾಲಿ, ಮಾಜಿ ಶಾಸಕರು, ಪ್ರಬಲ ಆಕಾಂಕ್ಷಿಗಳು ಈಗಿನಿಂದಲೇ ಸಿದ್ಧತೆ, ಹೊಂದಾಣಿಕೆ, ಲಾಬಿ, ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಮತದಾರರ ಮನವೊಲಿಸುವ ಕೆಲಸ ನಡೆಸಿದ್ದಾರೆ.
ರಾಜಕೀಯ ವಿರೋಧಿಗಳನ್ನೂ ಒಂದೇ ವೇದಿಕೆಯಲ್ಲಿ ಕೂಡಿ ಕೆಲಸ ಮಾಡಿಸುವ ಶಕ್ತಿ ಹೊಂದಿರುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಈ ಬಾರಿ ಪಕ್ಷ ರಾಜಕಾರಣ ನೇರವಾಗಿ ಪ್ರವೇಶಿಸಿರುವ ಪರಿಣಾಮ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಅಲ್ಲದೆ, ಪಕ್ಷಾತೀತವಾಗಿ ಅವಿರೋಧ ಆಯ್ಕೆಗೆ ಬಿಜೆಪಿ, ಕಾಂಗ್ರೆಸ್ ಹಾಲಿ, ಮಾಜಿ ಶಾಸಕರು ಅಪಸ್ವರ ಎತ್ತಿದ್ದರಿಂದ ಸ್ಪರ್ಧೆಯ ತೀವ್ರತೆ ಹೆಚ್ಚಿದೆ.
ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೇರವಾಗಿ ಚುನಾವಣೆ ಅಖಾಡಕ್ಕಿಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಲಕ್ಷ್ಮಣ ಸವದಿ, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ಮಾಜಿ ಸಂಸದ ರಮೇಶ ಕತ್ತಿ ಇತರ ನಾಯಕರು ಮೌನ ವಹಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಈ ಬಾರಿ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ ಜಾರಕಿಹೊಳಿ ಸೇರಿ ಹಾಲಿ, ಮಾಜಿ ಶಾಸಕರ ಪುತ್ರರು ಸ್ಪರ್ಧೆಗೆ ತಯಾರಿ ಆರಂಭಿಸಿದ್ದಾರೆ. ರಾಮದುರ್ಗ, ಯರಗಟ್ಟಿ, ಕಿತ್ತೂರು, ಅಥಣಿ, ಚಿಕ್ಕೋಡಿ ಸೇರಿ ಕೆಲವೆಡೆ ಶಾಸಕರೇ ಸ್ಪರ್ಧಿಸಲು ಮುಂದಾಗಿದ್ದಾರೆ. ಹೀಗಾಗಿ ಈಗಾಗಲೇ ಬ್ಯಾಂಕಿನ ಎಲ್ಲ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂಬ ಪ್ರಯತ್ನಕ್ಕೆ ಆರಂಭದಲ್ಲೇ ಅಪರಸ್ವರ ಎದ್ದಿದೆ. ಹೊಂದಾಣಿಕೆ ರಾಜಕಾರಣ ಬದಲಾಗಿ ನೇರವಾಗಿ ಚುನಾವಣೆ ಎದುರಿಸೋಣ ಎಂದು ಕಾಂಗ್ರೆಸ್ ವರಿಷ್ಠರ ನಿರ್ಧಾರ ಜಿಲ್ಲೆಯ ಹೊಂದಾಣಿಕೆ ರಾಜಕಾರಣಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಬೆಳಗಾಡಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಗೆ ಯರಗಟ್ಟಿ, ರಾಮದುರ್ಗ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಮೂಡಲಗಿ, ಹುಕ್ಕೇರಿ ಕಗ್ಗಂಟಾಗಿ ಪರಿಣಮಿಸಿದೆ. ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮನವೊಲಿಕೆಗೂ ಆಕಾಂಕ್ಷಿಗಳು ಜಗ್ಗುತ್ತಿಲ್ಲ. ನೇರಾನೇರ ಚುನಾವಣೆ ನಡೆದು ಗೆಲ್ಲಲಿ. ಯಾರದ್ದೋ ಲಾಭಕ್ಕಾಗಿ ನಮ್ಮ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ. ಹಾಲಿ, ಮಾಜಿ ಶಾಸಕರು ಸ್ಪರ್ಧಿಸುವ ಬದಲು ಪಕ್ಷದ ನಿಷ್ಠಾವಂತರಿಗೆ ಅಥವಾ ಸಹಕಾರಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೆಲ ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಆಗ್ರಹಿಸಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ತಯಾರಿ ನಡೆಸಿದ್ದೇವೆ. ಯಾರದು ಶಕ್ತಿಯಿದೆ, ಹೆಚ್ಚು ಸೊಸೈಟಿ ಬೆಂಬಲಿವಿದೆ ಅವರನ್ನು ಕಣಕ್ಕಿಳಿಸುತ್ತೇವೆ. ಯರಗಟ್ಟಿಯಲ್ಲಿ ನಮ್ಮ ಅಭ್ಯರ್ಥಿ ಇರುವುದರಿಂದ ಅಲ್ಲಿ ಸಭೆ ಮಾಡಿದ್ದೇವೆ. ನಮ್ಮ ಪುತ್ರ ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಧರಿಸಿಲ್ಲ. ಇನ್ನೂ ಮೂರು ತಿಂಗಳು ಅವಕಾಶವಿದೆ. ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ