ಪ್ರಗತಿ ಪಥದತ್ತ ಡಿಸಿಸಿ ಬ್ಯಾಂಕ್ ದಾಪುಗಾಲು

DCC BANK PRESS MEET
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಚಿವ ಶಿವಾನಂದ ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ರಾಜಶೇಖರ ಗುಡದಿನ್ನಿ, ಶೇಖರ ದಳವಾಯಿ, ಸೋಮನಗೌಡ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ 1919ರಲ್ಲಿ ಸ್ಥಾಪಿಗೊಂಡ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 104 ವರ್ಷಗಳ ನಿರಂತರ ಹಾಗೂ ಸಮರ್ಪಕ ಸೇವೆ ಪೂರ್ಣಗೊಳಿಸಿ 105ನೇ ವರ್ಷದಲ್ಲಿ ಯಶಸ್ವಿಯಾಗಿ ಕಾರ್ಯೋನ್ಮುಖವಾಗಿದ್ದು, ಪ್ರಸಕ್ತ 2022-23ನೇ ಸಾಲಿಗೆ 14.30 ಕೋಟಿ ಲಾಭ ಗಳಿಸಿದೆ ಎಂದು ಅಧ್ಯಕ್ಷ, ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಒಟ್ಟು 19.19.31 ಕೋಟಿ ಲಾಭಗಳಿಸಿದ್ದು ಇದರಲ್ಲಿ 5.01 ಕೋಟಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟಲಾಗಿದೆ. ಹೀಗಾಗಿ 14.30 ಕೋಟಿ ಲಾಭದಲ್ಲಿದ್ದೇವೆ. 2002-03ಕ್ಕೆ 316.86 ಕೋಟಿಗಳಷ್ಟಿದ್ದ ದುಡಿಯುವ ಬಂಡವಾಳ ಈಗ 2022-23ಕ್ಕೆ 4612.74 ಕೋಟಿಗಳಷ್ಟಾಗಿದೆ. ಕಳೆದ 20 ವರ್ಷಗಳಲ್ಲಿ ಬ್ಯಾಂಕ್ ಒಟ್ಟು 155.01 ಕೋಟಿ ಲಾಭ ಗಳಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಬ್ಯಾಂಕ್‌ನ ಬಂಡವಾಳ 290.70 ಕೋಟಿಗಳಿಂದ 483.03 ಕೋಟಿ, ಠೇವಣಿ 1711 ಕೋಟಿಯಿಂದ 3193 ಕೋಟಿ, ಸಾಲ ವ ಮುಂಗಡಳು 1741 ಕೋಟಿಗಳಿಂದ 2890 ಕೋಟಿ, ಹೂಡಿಕೆಗಳು 636 ಕೋಟಿಗಳಿಂದ 1387 ಕೋಟಿಗಳಷ್ಟಾಗಿದೆ. ಬ್ಯಾಂಕ್‌ನ ದುಡಿಯುವ ಬಂಡವಾಳ 2616 ಕೋಟಿಯಿಂದ 4613 ಕೋಟಿಗಳಷ್ಟಾಗಿದೆ. 2018-19ರಿಂದ 2022-23ರ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ವ್ಯವಹಾರ 3451.73 ಕೋಟಿಯಿಂದ 6082.88 ಕೋಟಿಗೆ ಏರಿಕೆಯಾಗಿದೆ. ಅಲ್ಲದೇ, ಈ ಅವಧಿಯಲ್ಲಿ ಬ್ಯಾಂಕ್ ಒಟ್ಟು 62.53 ನಿವ್ಹಳ ಲಾಭ ಗಳಿಸಿದೆ ಎಂದರು.

2022-23ನೇ ಸಾಲಿನ ಸಾಧನೆ

ಈ ಸಾಲಿನಲ್ಲಿ ಗಳಿಸಲಾದ ನಿವ್ಹಳ ಲಾಭ ಬ್ಯಾಂಕ್‌ನ ಇತಿಹಾಸದಲ್ಲಿಯೇ ಗರಿಷ್ಠವಾಗಿದೆ. ವಿಜಯಪುರ ತಾಲೂಕಿನ ನಾಗಠಾಣ, ಮಮದಾಪುರ ಹಾಗೂ ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮದಲ್ಲಿ ನೂತನ ಶಾಖೆಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಈಗ ಜಿಲ್ಲೆಯಾದ್ಯಂತ ಒಟ್ಟು 46 ಶಾಖೆಗಳನ್ನು ಹೊಂದಿದೆ. ಇನ್ನೂ 10 ಹೊಸ ಶಾಖೆಗಳನ್ನು ಆರಂಭಿಸಲು ಅನುಮತಿ ಕೋರಿ ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.

ಕೃಷಿಗಾಗಿ 1562.79 ಕೋಟಿ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ 1124.72 ಕೋಟಿ ಸೇರಿ ಒಟ್ಟು 2687.51 ಕೋಟಿ ಸಾಲ ವಿತರಿಸಲಾಗಿದೆ. 2021-22ನೇ ಸಾಲಿನಲ್ಲಿ 5464.06ಕೋಟಿಗಳಷ್ಟಿದ್ದ ವ್ಯವಹಾರ 2022-23ನೇ ಸಾಲಿನಲ್ಲಿ 6082.88 ಕೋಟಿಗಳಷ್ಟಾಗಿದೆ. ಅಂದರೆ 618.82 ಕೋಟಿ ಹೆಚ್ಚಳವಾಗಿದೆ ಎಂದರು.

ಫ್ಯಾಕ್ಸುಗಳ ಅಭಿವೃದ್ಧಿ

ಫ್ಯಾಕ್ಸುಗಳ ವ್ಯಾಪಾರ ಅಭಿವೃದ್ಧಿ ಯೋಜನೆ ಅಳವಡಿಸಲಾಗಿದ್ದು, ರಾಜ್ಯದಲ್ಲಿಯೇ ಮಾದರಿಯಾಗಿದೆ. 2023 ಮಾ. 31ಕ್ಕೆ ಸಂಘಗಳ ಮಟ್ಟದಲ್ಲಿ ಸದಸ್ಯರ ಠೇವಣಿ 870.46 ಕೋಟಿಗಳಿಷ್ಟಿದೆ. ಪ್ರಸಕ್ತ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಪೂರ್ವ 193 ಸಂಘಗಳು ಲಾಭದಲ್ಲಿದ್ದರೆ 79 ಸಂಘಗಳು ಹಾನಿಯಲ್ಲಿವೆ. ಜಿಲ್ಲೆಯಲ್ಲಿ ಒಟ್ಟು 272 ಕಾರ್ಯನಿರತ ಫ್ಯಾಕ್ಸುಗಳ ಪೈಕಿ 235 ಸ್ವಂತ ಕಚೇರಿ ಹೊಂದಿವೆ. 20 ಫ್ಯಾಕ್ಸುಗಳಿಗೆ ನಿವೇಶನ ಇದ್ದು, 17 ಫ್ಯಾಕ್ಸುಗಳು ಮಾತ್ರ ನಿವೇಶನರಹಿತವಾಗಿವೆ. ಎಲ್ಲ ಸಂಘಗಳಿಗೂ ಸ್ವಂತ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
2022-23ನೇ ಸಾಲಿನ ಬ್ಯಾಂಕ್ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು ‘ಅ’ ವರ್ಗದ ಬ್ಯಾಂಕ್‌ನ್ನಾಗಿ ವರ್ಗೀಕರಿಸಲಾಗಿದೆ. ನಬಾರ್ಡ್‌ನಿಂದ 2021-22ನೇ ಸಾಲಿನ ಲೆಕ್ಕ ಪರಿವೀಕ್ಷಣೆಯಾಗಿದ್ದು ಆಗಲೂ ‘ಅ’ ಶ್ರೇಣಿ ಬ್ಯಾಂಕ್ ಎಂದು ಗುರುತಿಸಲಾಗಿದೆ. ಬ್ಯಾಂಕ್‌ನ ನೂತನ ಕಟ್ಟಡ ಪೂರ್ಣಗೊಂಡಿದ್ದು, ಕಾರಣಾಂತರಗಳಿಂದ ಮುಂಡೂಡಿದ್ದ ಶತಮಾನೋತ್ಸವ ಸಮಾರಂಭವನ್ನು ಈ ನೂತನ ಕಟ್ಟಡ ಲೋಕಾರ್ಪಾಣೆಯೊಂದಿಗೆ ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಭವಿಷ್ಯದ ಯೋಜನೆಗಳು:
2023-24ನೇ ಸಾಲಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಿರುವ 4612.74 ಕೋಟಿ ದುಡಿಯುವ ಬಂಡವಾಳವನ್ನು 5000 ಕೋಟಿಗೆ ಹೆಚ್ಚಿಸಿ ಒಟ್ಟು 6620 ಕೋಟಿ ವ್ಯವಹಾರ ನಿರ್ವಹಿಸಿ 15.50 ಕೋಟಿ ನಿವ್ಹಳ ಲಾಭ ಗಳಿಸಲು ಯೋಜನೆ ರೂಪಿಸಿ ಜಾರಿಗೊಳಿಸಲಾಗಿದೆ. ಒಟ್ಟು 2.42 ಲಕ್ಷ ರೈತರಿಗೆ 1720 ಕೋಟಿ ಕೃಷಿ ಸಾಲ ವಿತರಣೆ ಗುರಿ ಹೊಂದಿದ್ದು, ಈ ಪೈಕಿ 19200 ಹೊಸ ರೈತರಿಗೆ 185 ಕೋಟಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ. ರೈತರ ಬೇಡಿಕೆ ಸ್ಪಂದಿಸಿ 8 ಎಕರೆ ನೀರಾವರಿ ಹೊಂದಿದ ರೈತರಿಗೆ ಗರಿಷ್ಠ 15 ಲಕ್ಷ ರೂ.ಗಳನ್ನು ತೋಟದ ಮನೆ ನಿರ್ಮಾಣಕ್ಕೆ ಸಾಲ ನೀಡುವ ಹೊಸ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ರೈತರು ಆಕಸ್ಮಿಕವಾಗಿ ದುರ್ಮರಣಕ್ಕೆ ತುತ್ತಾದರೆ ಪರಿಹಾರ ಕಲ್ಪಿಸಲು ‘ರೈತ ಕಲ್ಯಾಣ ನಿಧಿ’ ಸ್ಥಾಪಿಸಲಾಗಿದೆ. ಗ್ರಾಹಕರ ಸಾಲದ ಮಿತಿ 10ರಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಬಂಗಾರ ಅಡವಿನ ಸಾಲದ ಮಿತಿ 30ರಿಂದ 75 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ದ್ವಿಚಕ್ರ ವಾಹನ ಸಾಲದ ಮಿತಿ 1ರಿಂದ 1.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ.13 ರಿಂದ ಶೇ.11ಕ್ಕೆ ಇಳಿಸಿ ಗೊತ್ತುಪಡಿಸಲಾಗಿದೆ ಎಂದರು.

ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಶೇಖರ ದಳವಾಯಿ, ಸೋಮನಗೌಡ ಬಿರಾದಾರ, ಕಲ್ಲನಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ರಾಜೇಶ್ವರಿ ಹೆಬ್ಬಾಳ, ಅರವಿಂದ ಪೂಜಾರಿ, ಉಪ ನಿಬಂಧಕ ಸಿ.ಎಸ್. ನಿಂಬಾಳ, ಎಸ್.ಕೆ. ಭಾಗ್ಯಶ್ರೀ, ಚಾರ್ಟರ್ಡ್ ಅಕೌಂಟಂಟ್ ಎಸ್.ಎಸ್.ಸಿಂಧೆ, ಆಡಳಿತ ಮಂಡಳಿ ಸಲಹೆಗಾರ ಜೆ. ಕೊಟ್ರೇಶಿ, ಸಿಇಒ ಎಸ್.ಡಿ. ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net