ಡಿಸಿಸಿ ಬ್ಯಾಂಕ್​ಗೆ 33.11 ಕೋಟಿ ರೂ. ಲಾಭ

17manju2
Published on

ಬೆಳಗಾವಿ: ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆಸಾಲ ನೀಡಿರುವ, ಠೇವಣಿ ಹೊಂದಿರುವ ಖ್ಯಾತಿಗೆ ಒಳಗಾಗಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್​ 33.11 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್​ 30.57 ಕೋಟಿ ರೂ. ಲಾಭ ಹೊಂದಿತ್ತು. ಪ್ರಸಕ್ತ 2024&25ನೇ ಸಾಲಿನ ಆರ್ಥಿಕ ವರ್ಷದಲ್ಲಿ 33.11 ಕೋಟಿ ರೂ. ಲಾಭ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 2.54 ಕೋಟಿ ರೂ. ಅಧಿಕಕೊಂಡು ಲಾಭದಲ್ಲಿ ಶೇ.8.31ರಷ್ಟು ಹೆಚ್ಚಳವಾಗಿದೆ ಎಂದರು.

415.24 ಕೋಟಿ ರೂ. ಸಾಲ ವಿತರಣೆ

ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ಸಾಲ ಯೋಜನೆ ಅಡಿಯಲ್ಲಿ ಜಿಲ್ಲೆಯ 4,88,379 ರೈತರಿಗೆ 3,476.66 ಕೋಟಿ ರೂ. ಬೆಳೆಸಾಲ ವಿತರಣೆ ಮಾಡಲಾಗಿದೆ. ಕಳೆದ ವರ್ಷ 4,68,775 ರೈತರಿಗೆ 3,060.42 ಕೋಟಿ ರೂ.ಸಾಲ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ 19,604 ಹೊಸ ಸದಸ್ಯರಿಗೆ ಸಾಲ ನೀಡಲಾಗಿದೆ. ನಬಾರ್ಡ್​ ಸಂಸ್ಥೆಯವರು ಪುನರ್​ ಧನ ಸಾಲ ಯೋಜನೆ ಅಡಿಯಲ್ಲಿ ಬಿಡಿಸಿಸಿ ಬ್ಯಾಂಕ್​ಗೆ ಕಳೆದ ವರ್ಷ 774 ಕೋಟಿ ರೂ. ನೀಡಿದ್ದರು. ಆದರೆ, ಪ್ರಸ್ತುತ ವರ್ಷ ಕೇವಲ 461 ಕೋಟಿ ರೂ.ಸಾಲ ನೀಡಿದ್ದಾರೆ. ಕಳೆದ ಸಾಲಿಗಿಂತ 313 ಕೋಟಿ ರೂ. ಕಡಿಮೆ ನೀಡಿದ್ದಾರೆ. ಆದರೂ, ಜಿಲ್ಲೆಯ ರೈತರಿಗೆ ಅನುಕೂಲಕ್ಕಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದು 415.24 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಶ್ರೀಕಾಂತ ಡವಣ, ಶಿವಾನಂದ ಡೋಣಿ, ರಾಜೇಂದ್ರ ಅಂಕಲಗಿ, ಪಂಚನಗೌಡ ದ್ಯಾಮನಗೌಡರ, ಸಂಜು ಅವಕ್ಕನವರ, ನೀಲಕಂಠ ಕಪ್ಪಲಗುದ್ದಿ, ಕೃಷ್ಣಾ ಅನಗೋಳಕರ, ಸತೀಶ ಕಡಾಡಿ, ಗಜಾನನ ಕ್ವಳ್ಳಿ, ರವೀಂದ್ರ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಸುರೇಶ ಅಳಗುಂಡಿ ಇತರರಿದ್ದರು.

ಕಾರ್ಖಾನೆಗಳಿಗೆ 1,486 ಕೋಟಿ ರೂ.ಸಾಲ ವಿತರಣೆ

ಬಿಡಿಸಿಸಿ ಬ್ಯಾಂಕ್​ ವತಿಯಿಂದ ಎಂಟು ಸಹಕಾರಿ ಮತ್ತು 15 ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಒಟ್ಟು 1,486.96 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಪ್ರಸ್ತುತ ಕಂತು 162.47 ಕೋಟಿ ರೂ. ಮತ್ತು 192.22 ಕೋಟಿ ರೂ. ಬಡ್ಡಿ ವಸೂಲಿ ಮಾಡಲಾಗಿದೆ. ಆದರೆ, ಯಾವುದೇ ಸಕ್ಕರೆ ಕಾರ್ಖಾನೆಗಳು ಅಸಲು ಮತ್ತು ಬಡ್ಡಿ ಸಾಲ ಬಾಕಿ ಉಳಿಸಿಕೊಂಡಿಲ್ಲ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಬ್ಯಾಂಕಿನ ಆದಾಯಕ್ಕೆ ಕುಂದು ಬಾರದಂತೆ ಮತ್ತು ಕಾರ್ಖಾನೆಗಳಿಗೆ ಸಮಸ್ಯೆ ಉಂಟಾಗದಂತೆ ಸಾಲ ವಸೂಲಿ ಮಾಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ವಿವರಿಸಿದರು.

6,087.06 ಕೋಟಿ ರೂ. ಠೇವಣಿ ಸಂಗ್ರಹದಲ್ಲಿ ದಾಖಲೆ

ಜಿಲ್ಲೆ ರೈತ ಸದಸ್ಯರು, ಸಹಕಾರಿ ಸಂಸ್ಥೆಗಳು, ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸದಿಂದ ಪ್ರಸ್ತುತ ವರ್ಷ 6,087.06 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಕಳೆದ ವರ್ಷಕ್ಕಿಂತ 290 ಕೋಟಿ ರೂ. ಠೇವಣಿ ಹೆಚ್ಚಳವಾಗಿದೆ. 2025&26ನೇ ಸಾಲಿನ ಆರ್ಥಿಕ ವರ್ಷದಲ್ಲಿ 10 ಸಾವಿರ ಕೋಟಿ ರೂ. ಠೇವಣಿ ಸಂಗ್ರಹ ಗುರಿ ಹಾಕಿಕೊಂಡಿದ್ದೇವೆ. 3.22 ಲಕ್ಷ ಸದಸ್ಯರನ್ನು ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಅಡಿಯಲ್ಲಿ ನೋಂದಾಯಿಸಿದ್ದೇವೆ. ಬೆಳಗಾವಿ, ಕಿತ್ತೂರು, ರಾಯಬಾಗ, ಖಾನಾಪುರ ತಾಲೂಕಿನಲ್ಲಿ 9 ಹೊಸ ಶಾಖೆ ಆರಂಭಿಸುತ್ತಿದ್ದೇವೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಮೇನಲ್ಲಿಕ ಶತಮಾನೋತ್ಸವ

ಪ್ರಸಕ್ತ ಸಾಲಿನಲ್ಲಿ ಬಿಡಿಸಿಸಿ ಬ್ಯಾಂಕ್​ ಕೋಟ್ಯಂತರ ರೂ. ಲಾಭಗಳಿಸಿದ್ದು, ರೈತರಿಗೆ ಅಧಿಕ ಪ್ರಮಾಣದಲ್ಲಿ ಸಾಲ ವಿತರಣೆ ಮಾಡಲಾಗಿದೆ. ಅಲ್ಲದೆ, ನಿರೀಕ್ಷೆ ಮೀರಿ ಠೇವಣಿ ಸಂಗ್ರಹವಾಗಿದೆ. ಬ್ಯಾಂಕ್​ ಆರಂಭಗೊಂಡು 100 ವರ್ಷ ಪೂರೈಸಿರುವ ಹಿನ್ನೆಲೆ ಮೇನಲ್ಲಿ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಹಕಾರ ಸಚಿವ ಅಮಿತ್​ ಶಾ ಅವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗುತ್ತಿದೆ. ಬ್ಯಾಂಕ್​ನಲ್ಲಿ ಖಾಲಿ ಉಳಿದಿರುವ 161 ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೆಮುಲ್​ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಸೌಭಾಗ್ಯ ಲಕ್ಷಿ$್ಮ ಕಾರ್ಖಾನೆಗೆ 160 ಕೋಟಿ ರೂ. ಸಾಲ

ಗೋಕಾಕ ತಾಲೂಕಿನ ಸೌಭಾಗ್ಯ ಲಕ್ಷಿ$್ಮ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಕಂಪನಿಯವರು ಖರೀದಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಂಪನಿಯವರು ಸಾಲಕ್ಕಾಗಿ ಬಿಡಿಸಿಸಿ ಬ್ಯಾಂಕ್​ಗೆ ಅರ್ಜಿ ಸಲ್ಲಿಸಿದ್ದರು. 330 ಕೋಟಿ ರೂ. ಕಾರ್ಖಾನೆಯ ಆಸ್ತಿ ಇಟ್ಟುಕೊಂಡು 160 ಕೋಟಿ ರೂ. ಸಾಲ ನೀಡಲಾಗಿದೆ. 8 ವರ್ಷದ ಸಾಲದ ಕಂತು ನೀಡಲಾಗಿದೆ. ಒಂದು ವೇಳೆ ಸಾಲ ಮರು ಪಾವತಿಸದಿದ್ದರೆ 330 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಎಂದು ಬೆಮುಲ್​ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net