

ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ೨೦೨೪-೨೫ ನೇ ಸಾಲಿನಲ್ಲಿ ರೂ.೧೬.೭೦ ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದರು.
ನಗರದ ಕೇಂದ್ರ ಕಚೇರಿಯ ಉನ್ನತಿ ಭವನದ ದಿ:ಪಂದ್ಯಂಡ.ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಇತ್ತೀಚೆಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ೨೦೨೪-೨೫ ನೇ ಸಾಲಿನ ೧೦೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ೧೯೨೧ರ ಜೂ.೨೮ ರಂದು ರೂ.೪೦೦೦ ಪಾಲು ಬಂಡವಾಳ, ರೂ.೧೦,೦೦೦ ಠೇವಣಿ, ೪೮ ಸಹಕಾರ ಸಂಘಗಳು ಮತ್ತು ೧೬ ಬಿಡಿ ಸದಸ್ಯರಿಂದ ಸ್ಥಾಪನೆಗೊಂಡಿತ್ತು. ಇಂದು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸಾರ್ಥಕತೆಯ ೧೦೪ ವರ್ಷಗಳನ್ನು ಪೂರ್ಣಗೊಳಿಸಿ, ಇದೀಗ ೧೦೫ರ ಸಂವತ್ಸರದಲ್ಲಿ ಪಾರದರ್ಶಕ ಆಡಳಿತವನ್ನು ನಡೆಸುತ್ತಿದೆ. ಆರ್.ಬಿ.ಐ, ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಇಂದು ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕಿಗಳ ಪೈಕಿ ೩ನೇ ಪ್ರಮುಖ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಎಂದು ಗುರುತಿಸಲ್ಪಟ್ಟಿರುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
೨೦೨೪-೨೫ನೇ ಸಾಲಿನ ಲೀಡ್ ಬ್ಯಾಂಕಿನ ತ್ರೈಮಾಸಿಕ ಸಭೆಯ ವರದಿಯಂತೆ ಜಿಲ್ಲೆಯಲ್ಲಿನ ವಿವಿಧ ೨೩ ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದಲ್ಲಿ ಪೈಪೋಟಿ ನಡೆಸಿ ಠೇವಣಾತಿ ಸಂಗ್ರಹಣೆಯಲ್ಲಿ ಶೇ.೨೭.೧೨ ರಷ್ಟು ಪಾಲು ಪ್ರಥಮ ಸ್ಥಾನ ಹಾಗೂ ಸಾಲ ನೀಡುವಿಕೆಯಲ್ಲಿ ಶೇ. ೨೪.೬೨ ರಷ್ಟು ಪಾಲಿನೊಂದಿಗೆ ಬ್ಯಾಂಕು ದ್ವೀತಿಯ ಸ್ಥಾನ ಹೊಂದಿದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ ೨೦೨೩-೨೪ನೇ ಸಾಲಿಗೆ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ನಮ್ಮ ಬ್ಯಾಂಕಿಗೆ ಆ.೧೩ ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ತೃತೀಯ ಬಹುಮಾನ ದೊರತ್ತಿರುತ್ತದೆ ಎಂದು ಮಾಹಿತಿ ನೀಡಿದರು.
ಮಾ.೩೧ ರ ಅಂತ್ಯಕ್ಕೆ ಒಟ್ಟು ೨೮೯ ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವ ಪಡೆದಿದ್ದು, ಎ,ಬಿ,ಸಿವರ್ಗದ ಸದಸ್ಯರಿಂದ ಒಟ್ಟು ೩೫.೯೧ ಕೋಟಿ ಷೇರು ಬಂಡವಾಳ ಸಂಗ್ರಹಿಸಿದೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೪.೪೫ ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿದೆ ಎಂದರು.
ಜಿಲ್ಲೆಯ ಸಹಕಾರ ಸಂಘಗಳಿಗೆ ನಿವೇಶನ/ ಕಟ್ಟಡ ಖರೀದಿಗೆ ಸಾಲ ಯೋಜನೆಯನ್ನು ರೂಪಿಸಿಲಾಗಿದೆ. ಸೋಲಾರ್ ಶಕ್ತಿಯ ಹೊಸಯೋಜನೆ ಮೂಲಕ ಕೃಷಿ ಸ್ಥಿರಾಸ್ತಿಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಉಪಕರಣಗಳ ಖರೀದಿ ಮತ್ತು ಅಳವಡಿಕೆಗಾಗಿ ಶೇ.೩ರ ಬಡ್ಡಿ ಸಹಾಯಧನದಲ್ಲಿ ಸಾಲ ನೀಡುವುದನ್ನು ಜಾರಿಗೊಳಿಸಲಾಗಿದೆ. ಬ್ಯಾಂಕಿನ ಗ್ರ್ರಾಹಕರ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಗರಿಷ್ಠ ರೂ.೬೦ ಲಕ್ಷಗಳವರೆಗಿನ ವಾಹನ ಸಾಲವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘಗಳಿಗೆ ಬಹುಮಾನ ನೀಡಿ ಪ್ರಶಂಸಿಸಲಾಯಿತು. ೨೦೨೪-೨೫ ನೇ ಸಾಲಿಗೆ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಮಡಿಕೇರಿ ತಾಲೂಕಿನ ಪೆರಾಜೆ(ಪ್ರ), ನಾಪೋಕ್ಲು(ದ್ವಿ), ಮತ್ತು ಪಯಶ್ವಿನಿ(ತೃ), ವಿರಾಜಪೇಟೆ ತಾಲೂಕಿನ ಹಾತೂರು(ಪ್ರ), ನಾಲ್ಕೇರಿ(ದ್ವಿ), ಟಿ.ಶೆಟ್ಟಿಗೇರಿ(ತೃ), ಸೋಮವಾರಪೇಟೆ ತಾಲೂಕಿನ ಐಗೂರು(ಪ್ರ), ರಾಮೇಶ್ವರ ಕೂಡುಮಂಗಳೂರು(ದ್ವಿ), ಗೌಡಳ್ಳಿ (ತೃ) ಸ್ಥಾನ ಪಡೆದಿದೆ. ಪಟ್ಟಣ / ಮಹಿಳಾ ಸಹಕಾರ ಬ್ಯಾಂಕು ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು(ಪ್ರಥಮ) ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕು ವಿರಾಜಪೇಟೆ (ಪ್ರಥಮ) ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಕೇಟೋಳಿರ.ಎಸ್.ಪೂವಯ್ಯ, ನಿರ್ದೇಶಕ ಹೊಸೂರು ಸತೀಶ್, ಹೊಟ್ಟೆಂಗಡ ರಮೇಶ್, ಜಲಜಾ ಶೇಖರ್ ಸೇರಿದಂತೆ ಇತರರಿದ್ದರು.