

ಕೋಲಾರ: ಅವನತಿಯ ಹಂತದಲ್ಲಿದ್ದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಒಂದು ಹಂತದಲ್ಲಿ ಸುಧಾರಣೆಯಾಗಿ ರೈತರಿಗೆ ಮತ್ತು ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುತ್ತಿತ್ತು. ಈಗ ಬ್ಯಾಂಕ್ ಮೇಲೆ ಕೆಲವರ ವಕ್ರ ದೃಷ್ಟಿ ಬಿದಿದ್ದು, ಹಳೇ ಇತಿಹಾಸ ಮರುಕಳಿಸುವ ಆತಂಕ ಕಾಡುತ್ತಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಿ.ಎಂ.ವೆಂಕಟೇಶ್ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಬಂಗಾರಪೇಟೆ, ಕೆಜಿಎಫ್ ಮತ್ತು ಮುಳಬಾಗಿಲು ವ್ಯಾಪ್ತಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘಗಳ ಸಿಇಒ, ಕಂಪ್ಯೂಟರ್ ಆಪರೇಟರ್ಗಳಿಗೆ ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕಂಪ್ಯೂಟರ್ ಆಪರೇಟರ್ಗಳು ಸೊಸೈಟಿಯ ಎರಡು ಕಣ್ಣುಗಳಿದ್ದಂತೆ. ಯಾರೇ ದಾರಿ ತಪ್ಪಿದರೂ ಸಂಘದ ಅವನತಿಗೆ ಕಾರಣವಾಗುತ್ತದೆ.
ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಒಕ್ಕೂಟದ ನಿರ್ದೇಶಕ ಉರಿಗಿಲಿ ಎಸ್.ಆರ್.ರುದ್ರಸ್ವಾಮಿ ಮಾತನಾಡಿ, ಡಿಸಿಸಿ ಬ್ಯಾಂಕಿನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಗಿಸಿದ ಕೀರ್ತಿ ಗೋವಿಂದಗೌಡರಿಗೆ ಸಲ್ಲುತ್ತದೆ. ಅವರ ಏಳಿಗೆ ಸಹಿಸದವರು ಸಂಸ್ಥೆ ಹೆಸರಲ್ಲಿ ರಾಜಕಾರಣ ಮಾಡಿ ಹಾಳು ಮಾಡಲು ಮುಂದಾಗಿರುವುದು ನಾಚಿಕಗೇಡಿನ ಸಂಗತಿ ಎಂದರು.
ವ್ಯಕ್ತಿಯ ಮೇಲಿನ ಕೋಪದಿಂದ ಸಹಕಾರಿ ಕ್ಷೇತ ನಾಶ ಮಾಡಲು ಮುಂದಾಗಿರುವುದು ಸರಿಯಲ್ಲ. ಬ್ಯಾಂಕಿನ ಅಭಿವೃದ್ಧಿಯಲ್ಲಿ ಎಲ್ಲರೂ ಸಹಕರಿಸಬೇಕೆಂದು ಕಿವಿ ಮಾತು ಹೇಳಿದರು.
ಸತ್ರ ಸಾಫ್ಟ್ವೇರ್ ಕಂಪನಿ ಪ್ರತಿನಿಧಿಗಳಿಂದ ತಂತ್ರಾಂಶ ಅಳವಡಿಕೆ ಕುರಿತು, ಡಿಸಿಸಿ ಬ್ಯಾಂಕ್ ಪ್ರತಿನಿಧಿಗಳಿಂದ ಕೇಂದ್ರ ಸರ್ಕಾರದ ಯೋಜನೆಯ ಪ್ರಯೋಜನಗಳ ಕುರಿತು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಹುಸೇನ್ ಸಾಬ್ ಎಂ.ದೊಡ್ಡಮನಿ ಅವರು ಲೆಕ್ಕ ಪತ್ರಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ವಕ್ರ ದೃಷ್ಟಿಯಿಂದ ಶೋಚನೀಯ ಸ್ಥಿತಿ: ಬ್ಯಾಲಹಳ್ಳಿ ಗೋವಿಂದಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಬ್ಯಾಂಕಿನ ಅಭಿವೃದ್ಧಿಯ ಜತೆಗೆ ಸಹಕಾರ ಕ್ಷೇತ್ರ, ಸೊಸೈಟಿಗಳ ಮೂಲಕ ರೈತರಿಗೆ, ಮಹಿಳಾ ಸಂಘಗಳಿಗೆ ಸಾಲ ನೀಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದರು. ಆದರೆ ಇತ್ತೀಚೆಗೆ ಕೆಲವರ ವಕ್ರ ದೃಷ್ಟಿಯಿಂದ ಬ್ಯಾಂಕ್ ಸ್ಥಿತಿ ಶೋಚನೀಯವಾಗಿದೆ ಎಂದು ಪಿ.ಎಂ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಕೋಲಾರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘಗಳ ಸಿಇಒ, ಕಂಪ್ಯೂಟರ್ ಆಪರೇಟರ್ಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಾಗಾರವನ್ನು ಒಕ್ಕೂಟದ ಅಧ್ಯಕ್ಷ ವೆಂಕಟೇಶಪ್ಪ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಸಿಇಒ ಕೆ.ಎಂ.ಭಾರತಿ, ಲಕ್ಷ್ಮೀದೇವಮ್ಮ, ರವಿಕುಮಾರ್, ಭಾರತಿ ಇದ್ದರು.