ಪಕ್ಷಾತೀತವಾಗಿ ಸಾಲ ವಿತರಣೆ

06 Srinivaspur 1
Published on

ಶ್ರೀನಿವಾಸಪುರ: 6 ವರ್ಷಗಳಿಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಪಕ್ಷಾತೀತ, ಜಾತ್ಯತೀತ ಹಾಗೂ ರಾಜಕೀಯ ರಹಿತವಾಗಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ಇದಕ್ಕೆ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಕೈಜೋಡಿಸಿದರೆ ಹೆಣ್ಣು ಮಕ್ಕಳ ಆರ್ಥಿಕಾಭಿವೃದ್ಧಿ ಇನ್ನಷ್ಟು ಚೈತನ್ಯಗೊಳ್ಳಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಗೌನಿಪಲ್ಲಿ ಮತ್ತು ಕೂರಿಗೆಪಲ್ಲಿ ಸಹಕಾರ ಸಂಘಗಳ ವ್ಯಾಪ್ತಿಯ 68 ಮಹಿಳಾ ಸಂಘಗಳಿಗೆ 3.24 ಕೋಟಿ ರೂ. ಸಾಲದ ಚೆಕ್ ವಿತರಿಸಿ ಮಾತನಾಡಿ, ಸ್ವ-ಸಹಾಯ ಸಂಘಗಳಿಗೆ ನೀಡುತ್ತಿರುವ ಶೂನ್ಯಬಡ್ಡಿ ಆದೇಶ ಸರ್ಕಾರ ಹಿಂಪಡೆದಿದ್ದು, ಇದನ್ನು ತಕ್ಷಣ ಜಾರಿ ಮಾಡಬೇಕು. ಈ ವಿಚಾರದಲ್ಲಿ ಶಾಸಕ ರಮೇಶ್‌ಕುಮಾರ್ ರಾಜ್ಯ ಮಟ್ಟದ ಆರ್ಥಿಕ ಇಲಾಖೆ ಮತ್ತು ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋಲಾರ ಡಿಸಿಸಿ ಬ್ಯಾಂಕ್‌ಗೆ 40 ಕೋಟಿ ಬಡ್ಡಿ ಹಣ ್ಞನೀಡುವುದು ಬಾಕಿ ಇದೆ. ಇದನ್ನು ಬಿಡುಗಡೆಗೊಳಿಸಲು ಶಾಸಕ ರಮೇಶ್‌ಕುಮಾರ್ ಮುಖ್ಯಮಂತ್ರಿ ಹಾಗೂ ಸಹಕಾರ ಮಂತ್ರಿಗಳ ಗಮನ ಸೆಳೆದಿದ್ದಾರೆ. ಇದರಿಂದ ರಾಜ್ಯದ ಎಲ್ಲ ಸಹಕಾರ ಬ್ಯಾಂಕ್‌ಗಳಿಗೆ ಬಾಕಿ ಇರುವ ಬಡ್ಡಿ ಹಣ ಬಿಡುಗಡೆ ಮಾಡದಿದ್ದಲ್ಲಿ ಬ್ಯಾಂಕ್‌ಗಳು ಹೊಡೆತಕ್ಕೆ ಸಿಲುಕಲಿವೆ ಎಂದರು.

ಹೆಣ್ಣು ಮಕ್ಕಳಿಗೆ ವಿತರಿಸುತ್ತಿರುವ ಸಾಲದಿಂದ ಮುಂಗಾರು ಬೆಳೆಗಳಾದ ನೆಲಗಡಲೆ, ತೊಗರಿ, ಸೇರಿ ಎಲ್ಲ ಬಿತ್ತನೆ ಕಾರ್ಯ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಆದ್ದರಿಂದ ಎಲ್ಲ ರೈತ ಕುಟುಂಬಗಳು ಬಿತ್ತನೆಗಾಗಿ ಸಾಲ ಮಾಡುವುದು ತಪ್ಪಿದಂತಾಗುತ್ತದೆ. ಸಾಲ ಪಡೆದ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್ ಅನ್ನು ರೈತರ ಹಾಗೂ ಹೆಣ್ಣು ಮಕ್ಕಳ ಕಾಮದೇನು ಎಂದು ಭಾವಿಸಿ ಸಾಲ ಮರುಪಾವತಿ ಮಾಡಬೇಕು ಎಂದರು,

ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ಲಕ್ಷ್ಮೀಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಕೃಷ್ಣಾರೆಡ್ಡಿ, ಯಲ್ದೂರು ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣಸ್ವಾಮಿ, ಗೌನಿಪಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಸತ್ಯನಾರಾಯಣ, ಮುಖಂಡ ಅಮರನಾಥರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿಗಳಾದ ಈರಪ್ಪರೆಡ್ಡಿ, ಪ್ರಭಾಕರರೆಡ್ಡಿ, ಶಿವಾರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net