

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 29784 ಮಹಿಳಾ ಸ್ವಸಹಾಯ ಸಂಘಗಳ ಪೈಕಿ ಮೊದಲ ಹಂತದಲ್ಲಿ 7300 ಸಂಘಗಳ ಕಾರ್ಯಚಟುವಟಿಕೆಗಳನ್ನು ಇ-ಶಕ್ತಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ನಡೆದ ಜಿಲ್ಲಾ ಯೋಜನಾ ಅನುಷ್ಠಾನ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಖ್ಯಾತಿಗೆ ಡಿಸಿಸಿ ಬ್ಯಾಂಕ್ ಒಳಗಾಗಿರುವುದರಿಂದ ಇ-ಶಕ್ತಿ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆ ತರುವ ಪ್ರಾಯೋಗಿಕ ಪ್ರಯತ್ನಕ್ಕಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ನಬಾರ್ಡ್ ಆಯ್ಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ 7300 ಮಹಿಳಾ ಸಂಘಗಳನ್ನು ಇದರಡಿ ತರಲಿದ್ದು, 73,000 ಮಹಿಳೆಯರು ಈ ಸಂಘಗಳ ಸದಸ್ಯರಾಗಿದ್ದಾರೆ. ಮೊದಲ ಹಂತವನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಬೇಕಿರುವುದರಿಂದ ಎಸ್‌ಎಫ್‌ಸಿಎಸ್‌ಗಳ ಗಣಕೀಕರಣ ಕಾರ್ಯ ಮುಗಿಸಲು ಕ್ರಮವಹಿಸಲಾಗಿದೆ ಎಂದರು.
ಮಹಿಳಾ ಸ್ವಸಹಾಯ ಸಂಘಗಳ ಮಾಸಿಕ ಸಭೆ, ಸಾಲ ವಿತರಣೆ, ಸಾಲ ಮರುಪಾವತಿ, ಉಳಿತಾಯ ಸೇರಿ ಎಲ್ಲ ಚಟುವಟಿಕೆ ಆನ್‌ಲೈನ್‌ನಲ್ಲಿ ದಾಖಲಾಗಲಿದೆ, ಎಲ್ಲ ಸಂಘಗಳಿಗೂ ಯೂಸರ್‌ಐಡಿ, ಪಾಸ್‌ವರ್ಡ್ ನೀಡಲಾಗುವುದು. 30 ಸಂಘಗಳಿಗೆ ಒಬ್ಬರಂತೆ ನೇಮಕಗೊಂಡಿರುವ 243 ಪ್ರೇರಕರ ಸಭೆಯನ್ನು ಡಿ.18ರಂದು ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕರೆಯಲಾಗಿದೆ ಎಂದರು.
ಇ-ಶಕ್ತಿ ಯೋಜನೆಯಡಿ ಸಂಘಗಳ ಸಂಪೂರ್ಣ ಮಾಹಿತಿ ಡಿಸಿಸಿ ಬ್ಯಾಂಕ್ ಸಾಫ್ಟ್‌ವೇರ್‌ಗೆ ಹರಿದು ಬರುವುದರಿಂದ ಸಂಘಗಳ ಸದೃಢತೆ, ಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ಭ್ರಷ್ಟತೆ ಕೊನೆಗೊಳ್ಳುತ್ತದೆ ಎಂದರು. ಮಹಿಳಾ ಸ್ವಸಹಾಯ ಸಂಘಗಳ ಹೆಚ್ಚು ಶಿಕ್ಷಣ ಪಡೆದವರನ್ನು ಪ್ರೇರಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಮಾಸಿಕ 4200 ರೂ ಸಂಭಾವನೆ ಸಿಗಲಿದೆ ಜತೆಗೆ 250 ರೂ ಮೊಬೈಲ್ ಬಳಕೆಗೆ ಹಣ ಸಿಗಲಿದೆ ಎಂದು ವಿವರಿಸಿದರು. ಬ್ಯಾಂಕ್ ಸಿಇಒ ಎಂ.ರವಿ, ಎಜಿಎಂ ಖಲೀಮುಲ್ಲಾ, ಪ್ರಮುಖರಾದ ಬೇಬಿ ಶಾಮಿಲಿ, ಟಿ.ಎನ್.ಶುಭಾ, ಕೆ.ಎನ್.ಮಮತಾ ಮತ್ತಿತರರಿದ್ದರು.
ಮಹಿಳಾ ಸಂಘಗಳಿಗೆ ಅತಿ ಹೆಚ್ಚು ಸಾಲ ನೀಡಿ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕಾಗಿ ಕೋಲಾರ ಡಿಸಿಸಿ ಬ್ಯಾಂಕನ್ನು ನಬಾರ್ಡ್ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ. ಇದು ಮೊದಲ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ನಟರಾಜನ್, ನಬಾರ್ಡ್ ಎಜಿಎಂ