

ಕೋಲಾರ : ಮಾರ್ಚ್ ಅಂತ್ಯದೊಳಗೆ ಎಲ್ಲ ರೀತಿಯ ಸಾಲ ವಸೂಲಿ ಮಾಡಬೇಕು. ಸಾಲ ತೀರಿಸದೆ ಯಾರಾದರೂ ಸುಸ್ತಿದಾರರಾಗಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಲ ವಸೂಲಾತಿ ಮತ್ತು ಠೇವಣಿ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ಕಂಡು ಬಂದಲ್ಲಿ ಕ್ರಮ ಜರುಗಿಸುವುದಾಗಿ ಹೇಳಿದರು.
ಮನೆ ನಿರ್ಮಾಣಕ್ಕೆ ನಮ್ಮ ಸ್ವಂತ ಹಣ ನೀಡಿಲ್ಲ, ಬ್ಯಾಂಕಿನಲ್ಲಿ ಬಡ ಹೆಣ್ಣು ಮಕ್ಕಳು ಠೇವಣಿ ಇಟ್ಟ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಸಾಲ ತೆಗೆದುಕೊಳ್ಳುವಾಗ ತೋರಿದ ಆಸಕ್ತಿ ಮರು ಪಾವತಿಗೆ ಏಕೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಲ ನೀಡಿದ ಅಧಿಕಾರಿಗಳು ಸಬೂಬು ಹೇಳುವುದು ಬಿಟ್ಟು ಮುಲಾಜು ಇಲ್ಲದೆ ಸಾಲ ವಸೂಲಿ ಮಾಡಬೇಕು. ಸಾಲ ವಸೂಲಾತಿಗೆ ಮುನ್ನ ನೋಟೀಸ್ ಜಾರಿ ಮಾಡಿ, ಜಗ್ಗಗಿದ್ದರೆ ಕಾನೂನು ಪ್ರಕಾರ ಆಸ್ತಿ ಹರಾಜು ಹಾಕಿ ಎಂದು ಸೂಚಿಸಿದರು.
ಬ್ಯಾಂಕ್ ವಹಿವಾಟು ಏರಿಕೆ: ನಾವು ಅಧಿಕಾರಕ್ಕೆ ಬಂದಾಗ ಕೇವಲ 55 ಕೋಟಿ ರೂ. ಇದ್ದ ವಹಿವಾಟು ಪ್ರಸ್ತುತ 1200 ರೂ. ದಾಟಿದೆ. ಮುಂದಿನ ದಿನಗಳಲ್ಲಿ ಇದನ್ನು 1500 ಕೋಟಿ ರೂ.ಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮೈಗಳ್ಳತನ ಬಿಟ್ಟು ಕೆಲಸ ಮಾಡಿದಲ್ಲಿ ಗುರಿ ಸಾಧಿಸಬಹುದೆಂದು ಅಭಿಪ್ರಾಯಪಟ್ಟರು.
ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್ ಕುಮಾರ್, ಕೆ.ವಿ.ದಯಾನಂದ್, ವೆಂಕಟರೆಡ್ಡಿ, ಹನುಮಂತರೆಡ್ಡಿ, ಬ್ಯಾಂಕಿನ ಯೋಜನಾ ವ್ಯವಸ್ಥಾಪಕ ಹುಸೇನ್ ದೊಡ್ಡಮುನಿ ಎಜಿಎಂಗಳಾದ ಶಿವಕುಮಾರ್, ಖಲಿಂಮುಲ್ಲಾ, ಅರುಣ್ ಕುಮಾರ್ ಉಪಸ್ಥಿತರಿದ್ದರು.
ಸಣ್ಣ ರೈತರಿಗೆ 500 ಕೋಟಿ ಸಾಲ: ಜಿಲ್ಲೆಯ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ಬತ್ತಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಸುತ್ತಿದೆ. ಸಣ್ಣ ರೈತರು ಬೆಳೆ ಬೆಳೆಯಲು ಉತ್ಸುಕರಾಗಿದ್ದಾರೆ. ಬ್ಯಾಂಕಿನಿಂದ ರೈತರಿಗೆ ಬೆಳೆ ಸಾಲ ನೀಡಿದಲ್ಲಿ ರೈತರಲ್ಲದೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ಎರಡೂ ಜಿಲ್ಲೆಯ ಸಣ್ಣ ರೈತರಿಗೆ ಕನಿಷ್ಠ 500 ಕೋಟಿ ರೂ. ಸಾಲ ನೀಡಬಹುದು. ಠೇವಣಿ ಸಂಗ್ರಹಕ್ಕೆ ಪ್ರವಾಸ ಕೈಗೊಳ್ಳಿ, ನಿವೃತ್ತ ಸರ್ಕಾರಿ ನೌಕರರನ್ನು ಭೇಟಿಯಾಗಿ ಬ್ಯಾಂಕಿನಲ್ಲಿ ಠೇವಣಿ ಇಡಲು ಮನವೊಲಿಸಿ, ಅನುಮಾನಗಳಿದ್ದರೆ ಮುಕ್ತವಾಗಿ ಚರ್ಚಿಸಿ ಬಗೆಹರಿಸಿ, ಠೇವಣಿ ಸಂಗ್ರಹಣೆ ವೇಳೆ ಮಾರ್ಗದರ್ಶನ ಬೇಕಾದಲ್ಲಿ ಸಹಕಾರ ನೀಡುವುದಾಗಿ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.