

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಗತಿಗೆ ಸಾಕಷ್ಟು ನೆರವು ನೀಡಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಉತ್ತೇಜನ ಹಾಗೂ ಆರ್ಥಿಕ ರಕ್ಷಾಕವಚ ತೊಡಸಿರುವ ನಬಾರ್ಡ್ ಈಗ ನೀಡಿರುವ ಟಾಸ್ಕ್ ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿದೆ.
2020-21ರ ವೇಳೆಗೆ ದೇಶದ 35000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ವಿವಿಧೋದ್ದೇಶ ಸೇವಾ ಸಹಕಾರ ಕೇಂದ್ರಗಳಾಗಿ(ಎಂಎಸ್‌ಸಿ) ಪರಿವರ್ತಿಸುವ ಉದ್ದೇಶದಿಂದ ಕೇಂದ್ರ ಸಹಕಾರ ನಬಾರ್ಡ್ ಸಂಸ್ಥೆಗೆ ಶಕ್ತಿ ತುಂಬಿದ್ದು ಇದನ್ನು ಬಳಸಿಕೊಂಡು ಕೃಷಿ ಮತ್ತು ಇನ್ನಿತರ ಆದಾಯ ಗಳಿಕೆಗೆ ಸಂಬಂಧಿಸಿದ ಚಟುವಟಿಕೆ ಪ್ರಾರಂಭಿಸಲು ಡಿಸಿಸಿ ಬ್ಯಾಂಕುಗಳಿಗೆ ಆಮಂತ್ರಣ ನೀಡಿದೆ.
ಅನ್ನದಾತರಿಗೆ, ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ, ಬಡ ಮಹಿಳೆಯರಿಗೆ ಹಾಗೂ ಸಂಸ್ಕರಣಾ ಘಟಕ, ವಾಣಿಜ್ಯ ಸಂಕೀರ್ಣ, ಗೋದಾಮು ನಿರ್ಮಾಣ, ಕೃಷಿ ಯಂತ್ರಗಳ ಸೇವಾ ಕೇಂದ್ರ ಸೇರಿ ಇನ್ನಿತರ ಆರ್ಥಿಕ ಚಟುವಟಿಗೆ ಪ್ರಾರಂಭಿಸಲು ನಬಾರ್ಡ್ ಫ್ಯಾಕ್ಸ್‌ಗಳಿಗೆ ಏಕಗವಾಕ್ಷಿ ಯೋಜನೆಯಡಿ ಸಾಲ ನೀಡಲು ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಎರಡೂ ಜಿಲ್ಲೆಗೆ ವರದಾನವಾಗಿದೆ.
ಸ್ವಂತ ಭೂಮಿ ಹೊಂದಿರುವ ಫ್ಯಾಕ್ಸ್‌ಗಳು ಎಂಎಸ್‌ಸಿ ಸ್ಥಾಪಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ಒಂದು ವೇಳೆ ಫ್ಯಾಕ್ಸ್‌ಗಳು ಭೂಮಿಯನ್ನು ಹೊಂದಿರದಿದ್ದರೆ ಅಂತಹ ಫ್ಯಾಕ್ಸ್‌ಗಳಿಗೆ ಭೂಮಿಯನ್ನು ಖರೀಸಿದಿ ಎಂಎಸ್‌ಸಿ ತೆರೆಯಲು ಡಿಸಿಸಿ ಬ್ಯಾಂಕ್ ಸಹ ಕೈಜೋಡಿಸಲು ಮುಂದಾಗಿದ್ದು ಫ್ಯಾಕ್ಸ್‌ಗಳಲ್ಲಿ ಇಚ್ಛಾಶಕ್ತಿ ಇದ್ದಲ್ಲಿ ಈ ಯೋಜನೆ ಮೂಲಕ ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳುವ ಜತೆಗೆ ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸಿ ಗ್ರಾಮೀಣಾಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶವಿದೆ.
ತಾಂತ್ರಿಕ ನೆರವು: ಎಂಎಸ್‌ಸಿಗಳ ಮೂಲಕ ಉದ್ದಿಮೆ ಸ್ಥಾಪಿಸಲು ಮುಂದಾಗುವವರಿಗೆ ತಾಂತ್ರಿಕ ತರಬೇತಿ, ಡಿಪಿಆರ್ ರಚನೆ ಹಾಗೂ ಮಾರುಕಟ್ಟೆ ಬಗ್ಗೆ ಅಧ್ಯಯನಕ್ಕಾಗಿ ನಬಾರ್ಡ್‌ನಿಂದ ಉಚಿತವಾಗಿ ಆರ್ಥಿಕ ನೆರವು ಸಿಗಲಿದ್ದು ಈ ಯೋಜನೆ ಅನುಷ್ಠಾನಕ್ಕೆ ತರುವುದು ಡಿಸಿಸಿ ಬ್ಯಾಂಕಿಗೆ ಪ್ರತಿಷ್ಠೆ ಜತೆಗೆ ಸವಾಲಾಗಿದೆ. ಎಂಎಸ್‌ಸಿಗಳ ಮೂಲಕ ಕೃಷಿ ಅಭಿವೃದ್ಧಿಯಲ್ಲದೆ ಕೃಷಿಯೇತರ ಚಟುವಟಿಕೆಗಳಡಿ ಅಡುಗೆ ಅನಿಲ ಏಜೆನ್ಸಿ, ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಸಿಗಲಿದೆ.
ಕಡಿಮೆ ಬಡ್ಡಿ ದರದಲ್ಲಿ ಸಾಲ: ಈ ಎಲ್ಲ ಸೌಲಭ್ಯ ಪಡೆಯಲಿಚ್ಚಿಸುವ ಫ್ಯಾಕ್ಸ್‌ಗಳಿಗೆ ಶೇ.4ರ ಬಡ್ಡಿದರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಾಲವನ್ನು ಅಪೆಕ್ಸ್ ಮತ್ತು ನಬಾರ್ಡ್ ಒದಗಿಸಲಿದ್ದು, ಡಿಸಿಸಿ ಬ್ಯಾಂಕ್ ಗ್ರಾಹಕರು ಮತ್ತು ನಬಾರ್ಡ್ ನಡುವೆ ಕೊಂಡಿಯಂತೆ ಕೆಲಸ ಮಾಡಲಿದೆ. ಫ್ಯಾಕ್ಸ್‌ಗಳು ಕ್ರಿಯಾಯೋಜನೆ ತಯಾರಿಸಿ, ಅದನ್ನು ಡಿಸಿಸಿ ಬ್ಯಾಂಕ್‌ನಿಂದ ಅನುಮೋದನೆ ಪಡೆದಲ್ಲಿ ಆರ್ಥಿಕ ನೆರವು ಸಿಗಲಿದೆ.
ನಬಾರ್ಡ್ ನೀಡುವ ಸಾಲಕ್ಕೆ ವಾರ್ಷಿಕ ಶೇ.4ರ ಬಡ್ಡಿ ವಿಧಿಸಲಾಗುತ್ತದೆ. ಆದರೆ ಯಾರು ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡುತ್ತಾರೋ ಅಂತಹ ಫ್ಯಾಕ್ಸ್‌ಗಳಿಗೆ ಶೇ.3ರಷ್ಟು ಹಣವನ್ನು ಕೇಂದ್ರ ಸರ್ಕಾರ ತೀರಿಸಲಿದ್ದು ಫ್ಯಾಕ್ಸ್‌ಗಳು ಕೇವಲ ಶೇ.1 ಬಡ್ಡಿ ಭರಿಸಬೇಕಾಗುತ್ತದೆ. 7 ವರ್ಷಗಳ ಅವಧಿಯೊಳಗೆ ಫ್ಯಾಕ್ಸ್‌ಗಳು ಸಾಲ ಮರುಪಾವತಿಸಲು ಕಾಲಾವಕಾಶ ನೀಡಲಾಗಿದೆ.
ವಿಶೇಷ ಸಭೆ: ಫ್ಯಾಕ್ಸ್‌ಗಳು ಎಂಎಸ್‌ಸಿಯಾಗಿ ರೂಪಾಂತರಗೊಳ್ಳುವ ಹಿನ್ನೆಲೆಯಲ್ಲಿ ನಬಾರ್ಡ್‌ನಿಂದ ಬಂದ ಪತ್ರದ ಕುರಿತು ಮಂಗಳವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ವ್ಯವಸ್ಥಾಪಕ ನಿರ್ದೇಶಕ ರವಿ, ನಿರ್ದೇಶಕ ಕೆ.ವಿ.ದಯಾನಂದ್, ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ ಅವರೊಂದಿಗೆ ವಿಶೇಷ ಸಭೆ ನಡೆಸಿ ಫ್ಯಾಕ್ಸ್‌ಗಳ ಆಡಳಿತ ಮಂಡಳಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಯೋಜನೆ ಯಶಸ್ವಿಗೊಳಿಸುವಂತೆ ಸೂಚಿಸಿದರು. ಎರಡೂ ಜಿಲ್ಲೆಯ ಫ್ಯಾಕ್ಸ್‌ಗಳ ಸಬಲೀಕರಣ ಹಾಗೂ ನಿರುದ್ಯೋಗ ನಿವಾರಣೆಗೆ ವರದಾನವಾಗಿರುವ ಯೋಜನೆ ಸವಾಲಾಗಿದ್ದು ಇಚ್ಛಾಶಕ್ತಿಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.