ರೈತರ ಸಮಸ್ಯೆ ಆಲಿಸಿದ ಡಿಸಿಸಿ ಬ್ಯಾಂಕ್ ; ಕಾಡಹಳ್ಳಿಯಲ್ಲಿ ಸಂವಾದ ಕಾರ್ಯಕ್ರಮ

17-klr-6
Published on

ಕ್ಯಾಲನೂರು: ಡಿಸಿಸಿ ಬ್ಯಾಂಕ್ ಸಾಲ ವಿತರಣೆಗೆ ಮಾತ್ರ ಸೀಮಿತವೆಂಬ ಅಪವಾದದಿಂದ ಹೊರಬರಲು ಆಡಳಿತ ಮಂಡಳಿ ಗುರುವಾರ ತಾಲೂಕಿನ ಕಾಡಹಳ್ಳಿಯಲ್ಲಿ ರೈತರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಅನ್ನದಾತರ ಪ್ರಸಂಶೆಗೆ ಪಾತ್ರವಾಯಿತು.

ಕ್ಯಾಲನೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ 150 ರೈತರಿಗೆ 1.36 ಕೋಟಿ ರೂ.ಗಳ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಬ್ಯಾಂಕ್‌ನಿಂದ ಬೇಕಾದ ಅಗತ್ಯ ಸವಲತ್ತುಗಳ ಬಗ್ಗೆ ಬೆಳಕು ಚೆಲ್ಲಿದರು.

ರೈತರು ಕುಂದುಕೊರತೆ ಹೇಳಿಕೊಳ್ಳುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವಕಾಶ ನೀಡುತ್ತಿದ್ದಂತೆ ರೈತರು ಅಭಿಪ್ರಾಯ ತಿಳಿಸಲು ಮುಂದಾದರು. ಕೃಷ್ಣಾಪುರದ ಪ್ರಗತಿಪರ ರೈತ ರಾಜಣ್ಣ ಎಂಬುವರು ರೈತರಿಗೆ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಸಿಗುವುದು ದುಸ್ತರವಾಗಿದೆ. ನಮ್ಮನ್ನು ಮೀಟರ್ ಬಡ್ಡಿ ದಂಧೆಯಿಂದ ಪಾರು ಮಾಡುವಲ್ಲಿ ಡಿಸಿಸಿ ಬ್ಯಾಂಕ್ ನೆರವಿಗೆ ಬಂದಿದೆ. ಆದರೆ ಬೆಳೆಗಳಿಗೆ ಅಗತ್ಯವಾಗಿ ಬೇಕಿರುವ ಔಷಧ ರಸಗೊಬ್ಬರ ಸೊಸೈಟಿ ಮೂಲಕ ವ್ಯವಸ್ಥೆ ಮಾಡಿಸಬೇಕು ಎಂದು ಕೋರಿದರು.

ಅಮ್ಮನಲ್ಲೂರು ರೈತ ನರಸಿಂಹಮೂರ್ತಿ, ಕ್ಯಾಲನೂರು ಭಾಗದಲ್ಲಿ ಬಹುತೇಕ ರೈತರು ಹಸು, ಕುರಿ, ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಪಶು ಆಸ್ಪತ್ರೆ ಇಲ್ಲದಿರುವುದರಿಂದ ಸರ್ಕಾರದ ಮೇಲೆ ಒತ್ತಡ ತಂದು ಕಾಡಹಳ್ಳಿಗೆ ಆಸ್ಪತ್ರೆ ಮಂಜೂರು ಮಾಡಿಸುವಂತೆ ಒತ್ತಾಯಿಸಿದರು.

ಕಾರಹಳ್ಳಿ ಮುನಿರಾಜು ಎಂಬುವರು ಗ್ರಾಮದಲ್ಲಿ ಸೊಸೈಟಿ ಮೂಲಕ ಪಡಿತರ ವಿತರಣೆಯಾಗುತ್ತಿದೆ. ಪಡಿತರ ದಾಸ್ತಾನಿಗೆ ಗೋದಾಮು ಅವಶ್ಯಕತೆ ಇರುವುದರಿಂದ ಡಿಸಿಸಿ ಬ್ಯಾಂಕ್‌ನಿಂದ ವ್ಯವಸ್ಥೆಗೆ ಮನವಿ ಮಾಡಿದರು. ರೈತರ ಎಲ್ಲ ಸಮಸ್ಯೆ ಆಲಿಸಿದ ಶಾಸಕ ಕೆ.ಶ್ರೀನಿವಾಸಗೌಡ, ಸರ್ಕಾರದಿಂದ ಹೊಸ ಪಶುವೈದ್ಯ ಆಸ್ಪತ್ರೆಗಳಿಗೆ ಮಂಜೂರಾತಿ ದೊರೆತಲ್ಲಿ ಕಾಡಹಳ್ಳಿಯಲ್ಲಿ ಆಸ್ಪತ್ರೆ ತೆರೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಪಡಿತರ ದಾಸ್ತಾನಿಗೆ ಗೋದಾಮು ನಿರ್ಮಿಸಲು ಶೇ 3ರ ಬಡ್ಡಿದರಲ್ಲಿ 30 ಲಕ್ಷ ರೂ. ಸಾಲ ನೀಡಲು ಬದ್ಧ. ಸಾಲ ಮರುಪಾವತಿ ಜವಾಬ್ದಾರಿಯನ್ನು ಸೊಸೈಟಿ ವಹಿಸಿಕೊಳ್ಳಬೇಕೆಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು. ನಿರ್ದೇಶಕರಾದ ಎಂ.ಎಲ್. ಅನಿಲ್‌ಕುಮಾರ್, ಕೆ.ವಿ. ದಯಾನಂದ, ಸೊಸೈಟಿ ಅಧ್ಯಕ್ಷ ರಾಮಾಂಜನಪ್ಪ, ನಿರ್ದೇಶರಾದ ಅಶ್ವತ್ಥಪ್ಪ, ಪಾಪಣ್ಣ, ಈರಪ್ಪ, ಗೌರಮ್ಮ, ಶಂಕರಪ್ಪ, ಕಡೆಗಟ್ಟೂರು ಸೊಸೈಟಿ ನಿರ್ದೇಶಕ ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್ ಉಪಸ್ಥಿತರಿದ್ದರು.

ಬೆಳೆ ಸಂರಕ್ಷಣೆಗೆ ಅಗತ್ಯವಿರುವ ಔಷಧ, ಗೊಬ್ಬರ ವ್ಯವಸ್ಥೆ ಸೊಸೈಟಿ ಜವಾಬ್ದಾರಿ. ಇ್ಕೆೆ ಅಧ್ಯಕ್ಷರಾಗಿರುವ ಶ್ರೀನಿವಾಸಗೌಡರು ರೈತರ ಅನುಕೂಲಕ್ಕಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ. ಒಂದು ವೇಳೆ ರೈತರು ಹೆಚ್ಚಿನ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಿದಲ್ಲಿ ವ್ಯವಸ್ಥೆ ಮಾಡಲಾಗುವುದು. ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net