

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಮಹಿಳಾ ಸ್ವಸಹಾಯ ಸಂಘದ 3.67 ಲಕ್ಷ ಕುಟುಂಬಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ನೀಡಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.
ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್‌ಗಳನ್ನು ಸೋಮವಾರ ವಿತರಿಸಿ ಮಾತನಾಡಿ, ತಾಲೂಕಿನ 74 ಮಹಿಳಾ ಸಂಘಗಳಿಗೆ 3.33 ಕೋಟಿ ರೂಗಳನ್ನು ಬಡ್ಡಿ ರಹಿತವಾಗಿ ಸಾಲ ವಿತರಿಸಲಾಗುತ್ತಿದೆ. ಮಹಿಳೆಯರು ಸದ್ಬಳಿಸಿಕೊಂಡು ಸ್ವಾವಲಂಭಿಗಳಾಗಿ ಅರ್ಥಿಕವಾಗಿ ಸಧೃಡರಾಗಬೇಕು ಎಂದರು.
ಹೊಲಕ್ಕೆ ಗೊಬ್ಬರ ಹಾಕಿದರೆ ಉತ್ತಮ ಫಸಲು ಪಡೆಯುವಂತೆ ಡಿಸಿಸಿ ಬ್ಯಾಂಕ್ ನಿಮ್ಮದೇ ಬ್ಯಾಂಕ್, ಬ್ಯಾಂಕಿನಲ್ಲಿ ಸಾಲ ಪಡೆಯಲಷ್ಟೇ ಸೀಮಿತವಾಗಿರದೆ ವೈಯಕ್ತಿಕ ಖಾತೆ ತೆರೆದು ಉಳಿತಾಯ, ನಿಶ್ಚಿತ ಠೇವಣಿ ಇಟ್ಟು ಬೆಳೆಸಿದರೆ ಬ್ಯಾಂಕ್ ಇನ್ನಷ್ಟು ಬೆಳೆದು ಲಕ್ಷಾಂತರ ಕುಟುಂಬಗಳಿಗೆ ಸಾಲ ನೀಡುವ ಸಾಮರ್ಥ್ಯ ಪಡೆಯುತ್ತದೆ. ಸಾಲಕ್ಕಾಗಿ ಡಿಸಿಸಿ ಬ್ಯಾಂಕ್, ಠೇವಣಿ ಇಡಲು ವಾಣಿಜ್ಯ ಬ್ಯಾಂಕ್ ಎಂದಾದರೆ ಯಾವ ನ್ಯಾಯ? ನಿಮ್ಮ ಬ್ಯಾಂಕ್‌ಗೆ ನೀವೇ ಮೋಸ ಮಾಡಿದಂತೆ. ನಾವು ನೀಡುವ ಸಾಲಕ್ಕೆ ಬಡ್ಡಿ ಇಲ್ಲ. ನೀವು ಇಡುವ ಠೇವಣಿಗೆ ನಾವು ಬಡ್ಡಿ ನೀಡುತ್ತೇವೆ ಎಂದು ಹುರಿದುಂಬಿಸಿದರು.
ಬಡವರಾಗಿ ಹುಟ್ಟುವುದು ಶಾಪವಲ್ಲ. ಬಡತನಕ್ಕೆ ಹೆಚ್ಚಿನ ಗೌರವ, ಸ್ವಾಭಿಮಾನ ಇದೆ. ಆಸ್ತಿ ಇಲ್ಲದವರಿಗೆ ಸಾಲ ನೀಡಿದ್ದು ಡಿಸಿಸಿ ಬ್ಯಾಂಕ್. ಯಾವುದೇ ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಸಾಲ ನೀಡಿಕೊಂಡು ಬರಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಬಗ್ಗೆ ಯಾರಾದರು ಮಾತನಾಡಿದರೆ ಅದು ನಮ್ಮ ಬ್ಯಾಂಕ್ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿ ಬಾಯಿ ಮುಚ್ಚಿಸಿ, ಬ್ಯಾಂಕ್‌ಗೆ ನೀರೆರೆದು ಪೋಷಿಸುವ ಜವಾಬ್ದಾರಿ ತಾಯಿಯಂದಿರದ್ದಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಎಂಡಿ ರವಿ ಮಾತನಾಡಿ, ಯಾವೂದೇ ಸವಲತ್ತು ಪಡೆಯುವಾಗ ಕೆಲವೊಂದು ಹೊಣೆಗಾರಿಕೆ ಮತ್ತು ಜವಾಬ್ದಾರಿ ಹೊತ್ತು ಅದನ್ನು ಪೂರೈಸಬೇಕು. ಆಗ ಅದರ ಮೇಲೆ ಅಧಿಕಾರ ಇರುತ್ತದೆ. ಕೆಳಸ್ತರದ ಬಡ ಜನತೆಯೇ ಬ್ಯಾಂಕಿನ ಆಧಾರ ಸ್ತಂಭಗಳು. ಬ್ಯಾಂಕಿನ ಪ್ರಗತಿ ನಿಮ್ಮನ್ನು ಅವಲಂಬಿಸಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್, ಎಂ.ಎಲ್. ಅನಿಲ್ ಕುಮಾರ್ ಮಾತನಾಡಿದರು. ನಬಾರ್ಡ್ ಸಂಪನ್ಮೂಲ ವ್ಯಕ್ತಿ ಚಂಗಪ್ಪ ಸಾಲ ಸೌಲಭ್ಯ, ಮರುಪಾವತಿ ಬಗ್ಗೆ ವಿವರಿಸಿದರು. ಹೋಳೂರು ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್ ಇತರರಿದ್ದರು.
ಬ್ಯಾಂಕ್ ಈ ಹಿಂದೆ ಯಾವ ಸ್ಥಿತಿಯಲ್ಲಿತ್ತು ಈಗ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಹೆಣ್ಣುಮಕ್ಕಳು ತುಂಬಿರುವ ಶಕ್ತಿಯೇ ಕಾರಣ. ಎಲ್ಲ ಟೀಕೆಗಳಿಗೆ ಪ್ರತ್ಯುತ್ತರ ತಾಯಿಯಂದಿರಿಂದಲೇ ಸಿಕ್ಕಿದೆ. ತಪ್ಪುಗಳಿದ್ದರೆ ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ