ಡಿಸಿಸಿ ಬ್ಯಾಂಕಿಗೆ ಲಿಂಗಾಯತರೇ ಅಧ್ಯಕ್ಷ

22ATHANI2
Published on

ಅಥಣಿ: ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಅಥಣಿಯಿಂದ ಮಾಜಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಕಾಗವಾಡದಿಂದ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಅವರನ್ನು ಕಣಕ್ಕಿಳಿಸುವುದು ಗ್ಯಾರಂಟಿಯಾಗಿದ್ದು, ಲಿಂಗಾಯತರೇ ಬ್ಯಾಂಕ್‌ನ ಅಧ್ಯಕ್ಷರಾಗಲಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಆರ್‌ಎಸ್‌ಪಿ ಸಭಾಂಗಣದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಈಚೆಗೆ ಕೊಲ್ಲಾಪುರದ ಕನ್ಹೇರಿಮಠದಲ್ಲಿ ಲಿಂಗಾಯತ ಶಾಸಕರನ್ನು ಒಗ್ಗೂಡಿಸಿ ಲಕ್ಷ್ಮಣ ಸವದಿ ಸಭೆ ಮಾಡಿದ್ದಾರೆ. ಜಾರಕಿಹೊಳಿ ಕುಟುಂಬ ಎಂದಿಗೂ ಲಿಂಗಾಯತ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

೨೦೧೮ರಲ್ಲಿ ಲಕ್ಷ್ಮಣ ಸವದಿ ಸೋತಾಗ ಅವರನ್ನು ಯಾರು ಡಿಸಿಎಂ ಮಾಡಿದರೋ ಗೊತ್ತಿಲ್ಲ. ಪಂಚಾಯಿತಿ ಚುನಾವಣೆಗೆ ಆಯ್ಕೆ ಆಗುವುದಕ್ಕೂ ಲಾಯಕ್ಕಿಲ್ಲ. ಸೋತರೂ ಎಂಎಲ್‌ಸಿ, ಡಿಸಿಎಂ, ಸಚಿವರನ್ನಾಗಿ ಮಾಡಿದರೂ ಉಪಕಾರ ತೀರಿಸದ ಮನುಷ್ಯ ಎಂದು ಸವದಿ ವಿರುದ್ಧ ಹರಿಹಾಯ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬರುವಂತೆ ದೆಹಲಿಯಿಂದ ಕರೆ ಬಂದಾಗ ನಿರಾಕರಿಸದಿದ್ದರೆ ಇಂದು ಮಂತ್ರಿ ಆಗಿರುತ್ತಿದ್ದೆ. ಪಕ್ಷಕ್ಕೆ ಅನ್ಯಾಯ ಮಾಡಿದ ಸವದಿ ಇರುವ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ ಗ್ರಾಪಂ, ತಾಪಂ, ಜಿಪಂ ಸೇರಿ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಸೋತಿದ್ದರೂ ಬಿಜೆಪಿ ಲಕ್ಷ್ಮಣ ಸವದಿಯನ್ನು ಎಂಎಲ್‌ಸಿ, ಡಿಸಿಎಂ ಮಾಡಿತು. ೨೦೨೩ರ ಚುನಾವಣೆಯ ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಸೇರಿದ ಸವದಿ ಮೋಸಗಾರ ರಾಜಕಾರಣಿ ಎಂದರು.

ಮಾಜಿ ಸಚಿವ ಶ್ರೀಮಂತ ಪಾಟೀಲ, ಮುಖಂಡರಾದ ಸಿದ್ದಪ್ಪ ಮುದಕಣ್ಣವರ, ರವಿ ಪಾಟೀಲ, ಗಿರೀಶ ಬುಟಾಳೆ, ಧರೆಪ್ಪ ಠಕ್ಕಣವರ, ಪ್ರಭಾಕರ ಚವಾನ, ದಾದಾ ಪಾಟೀಲ, ಅಪ್ಪಾಸಾಹೇಬ ಅವತಾಡೆ, ಮಲ್ಲಪ್ಪ ಹಂಚಿನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net