ಡಿಸಿಸಿ ಬ್ಯಾಂಕ್ ಚುನಾವಣೆಗೆ 2,693 ಮತದಾರರು

DCC2
Published on

ಬೆಳಗಾವಿ: ಕಳೆದ ಒಂದೂವರೆ ತಿಂಗಳಿಂದ ತೀವ್ರ ಚರ್ಚೆಯಲ್ಲಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ (ಬಿಡಿಸಿಸಿ) ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಾಗಿದೆ.

ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮತದಾರರ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಒಟ್ಟು 2,693 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನಕ್ಕೆ ಅರ್ಹತೆ ಪಡೆದಿರುವ ತಾತ್ಕಾಲಿಕ ಸಂಘಗಳ ಪಟ್ಟಿಯು ಅಧಿಕೃತವಾಗಿ ಪ್ರಕಟವಾಗಿದೆ. ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಸೋಮವಾರ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದು, ಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿ ಚುನಾವಣೆ ಕಾರ್ಯಚಟುವಟಿಕೆ, ಮತದಾರರ ಪಟ್ಟಿ ಸೇರಿ ಇತರ ಮಾಹಿತಿ ಪಡೆದುಕೊಂಡಿದ್ದಾರೆ.

ನಿರ್ದೇಶಕ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಗಳು ಸೊಸೈಟಿ ಪದಾಧಿಕಾರಿಗಳ ಗೌಪ್ಯ ಸಭೆ ಆರಂಭಿಸಿದ್ದು, ಕೆಲವೆಡೆ ಅವಿರೋಧ ಆಯ್ಕೆಗಾಗಿ ಮನವೊಲಿಕೆ ಕಾರ್ಯವೂ ನಡೆಯುತ್ತಿವೆ.

ತಾಲೂಕುಗಳಲ್ಲಿ ಒಮ್ಮತ ಅಭ್ಯರ್ಥಿ: ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬಿಡಿಸಿಸಿ ಆಡಳಿತ ಮಂಡಳಿಯ 16 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಕಡಿಮೆ ಮತದಾರರ ಸಂಖ್ಯೆ ಒಳಗೊಂಡಿರುವ ತಾಲೂಕುಗಳಲ್ಲಿ ಒಮ್ಮತ ಅಭ್ಯರ್ಥಿಗಳ ಅಂತಿಮಗೊಳಿಸಲು ಕಸರತ್ತು ನಡೆಯುತ್ತಿವೆ. ಆದರೆ, ಮತದಾನ ಮಾಡುವ ಸಂಘ ಸಂಸ್ಥೆಗಳ ಅಂತಿಮ ಪಟ್ಟಿ ಪ್ರಕಟವಾದ ಬಳಿಕವೇ ಅಭ್ಯರ್ಥಿಗಳ ಹೆಸರು ಅಧಿಕೃತವಾಗಲಿದೆ ಎಂದು ಬಿಡಿಸಿಸಿ ಹಾಲಿ, ಮಾಜಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವೋಟರ್ ಲಿಸ್ಟ್ ಪರಿಷ್ಕರಣೆ ಆರಂಭ

ಮತಗಟ್ಟೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿ ಚುನಾವಣೆಗೆ ಸಂಬಂಧಪಟ್ಟ ಕಾರ್ಯಚಟುವಟಿಕೆಗಳು ಸೆ.1ರಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ತಾತ್ಕಾಲಿಕ ಅರ್ಹ ಸಂಘಗಳ ಪಟ್ಟಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸೆ.25ಕ್ಕೆ ಮತದಾರರ ಪಟ್ಟಿ ಅಂತಿಮವಾಗಿ ಪ್ರಕಟವಾಗಲಿದ್ದು, ಮತದಾನಕ್ಕೆ ಅರ್ಹತೆ ಪಡೆದಿರುವ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು ತಮ್ಮ ಪರವಾಗಿ ಸೂಚಿಸುವ ಒಬ್ಬ ವ್ಯಕ್ತಿ ಮತದಾನ ಹಕ್ಕು ಪಡೆಯುತ್ತಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net