ಡಿಸಿಸಿ ಬ್ಯಾಂಕ್‌ಲ್ಲಿ ಮತ್ತೆ ಬಿಜೆಪಿ ಬಾವುಟ

DCC Bank
ಮಾಜಿ ಶಾಸಕ ಅರವಿಂದ ಪಾಟೀಲ ಅವರನ್ನು ಹೆಗಲ ಮೇಲೆ ಹೊತ್ತು ಅಭಿಮಾನಿಗಳು ಸಂಭ್ರಮಿಸಿದರು.
Published on

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್‌ನ ಸಂಪೂರ್ಣ ಆಡಳಿತ ಮಂಡಳಿಯನ್ನು ಅವಿರೋಧವಾಗಿಯೇ ಆಯ್ಕೆ ಮಾಡುವಲ್ಲಿ ಪ್ರಯತ್ನಿಸಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಜಿಲ್ಲಾ ನಾಯಕರು, ಕೊನೆಗೂ ಬಿಡಿಸಿಸಿ ಬ್ಯಾಂಕ್ ಮೇಲೆ ಬಿಜೆಪಿ ಬಾವುಟ ಹಾರಿಸುವಲ್ಲಿ ಯಶ ಕಂಡಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷರ ತವರಲ್ಲೇ ಕೇವಲ ಒಂದು ಸ್ಥಾನ ಮಾತ್ರ ಉಳಿಸಿಕೊಂಡ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತು.

ಶುಕ್ರವಾರ ಸಂಜೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ವಿಜಯಿಗಳಾದ ಖಾನಾಪುರ ಕ್ಷೇತ್ರದ ಬಿಜೆಪಿ ಬೆಂಬಲಿತ ಅರವಿಂದ ಪಾಟೀಲ ಹಾಗೂ ರಾಮದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಢವಣ ಹಾಗೂ ನೇಕಾರರ ಸಹಕಾರಿ ಕ್ಷೇತ್ರದ ಅಭ್ಯರ್ಥಿ, ಸತೀಶ ಜಾರಕಿಹೊಳಿ ಆಪ್ತ ಕೃಷ್ಣಾ ಅನಗೋಳಕರ್ ಬೆಂಬಲಿಗರು ಗುಲಾಲ ಎರಚಿ, ಸಿಹಿ ಹಂಚಿ ಸಂಭ್ರಮಪಟ್ಟರು.

2 ಮತಗಳಿಂದ ಸೋಲು: ಬಿಡಿಸಿಸಿ ಬ್ಯಾಂಕ್‌ನ ಆಡಳಿತವನ್ನು ಈ ಬಾರಿಯೂ ಬಿಜೆಪಿಯೇ ನಡೆಸಲಿದೆ ಎಂಬುದು 13 ನಿರ್ದೇಶಕರ ಅವಿರೋಧ ಆಯ್ಕೆಯಿಂದಲೇ ಖಾತರಿಯಾಗಿತ್ತು. ಆದರೂ ತಮ್ಮ ಕ್ಷೇತ್ರದಲ್ಲಿ ಪ್ರತಿಷ್ಠೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೀವ್ರ ಪೈಪೋಟಿ ನಡೆಸಿದ ರಾಜ್ಯ ಕಾಂಗ್ರೆಸ್ ಮಹಿಳಾ ವಕ್ತಾರೆ, ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕೇವಲ 2 ಮತಗಳ ಅಂತರಿಂದ ಪರಾಭವಗೊಂಡರು.

ಮತ್ತೊಂದೆಡೆ, ಸತೀಶ ಜಾರಕಿಹೊಳಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ ಅನಗೋಳಕರ್ (55 ಮತ) ಅವರು ಪ್ರತಿಸ್ಪರ್ಧಿ ಗಜಾನನ ಕ್ವಳಿ (38 ಮತ) ಅವರಿಗೆ 17 ಮತಗಳ ಅಂತರದಿಂದ ಸೋಲುಣಿಸಿದರು. ಒಂದೇ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಹೊಂದಿದ್ದ ರಾಮದುರ್ಗ ಕ್ಷೇತ್ರದಲ್ಲಿ ಭೀಮಪ್ಪ ಬೆಳವಣಿಕಿ (13 ಮತ) ಅವರನ್ನು ಶ್ರೀಕಾಂತ ಢವಣ (16 ಮತ) ಅವರು ಮೂರು ಮತಗಳ ಅಂತರದಿಂದ ಮಣಿಸಿ, ಗೆಲುವಿನ ನಗೆ ಬೀರಿದರು.

ಅರವಿಂದಗೆ ಗುಡ್‌ಲಕ್ ಹೇಳಿದ ಅಂಜಲಿ

ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಬಿ.ಕೆ.ಮಾಡೆಲ್ ಸ್ಕೂಲ್‌ನಿಂದ ಹೊರಟ ಪರಾಜಿತ ಅಭ್ಯರ್ಥಿ, ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರ ವಾಹನಕ್ಕೆ ಅಡ್ಡಗಡ್ಡಿ ಅರವಿಂದ ಪಾಟೀಲ ಅವರ ಬೆಂಬಲಿಗರು ಗುಲಾಲ ಎರಚಿ ವಿಜಯೋತ್ಸವ ಆಚರಿಸಿದರು. ಅರವಿಂದ ಪಾಟೀಲ ಹಾಗೂ ಬಿಜೆಪಿ ನಾಯಕರಿಗೆ ಜೈಕಾರ ಹಾಕಿದರು. ಈ ವೇಳೆ ವಾಹನದಿಂದ ಕೆಳಗಿಳಿದ ಶಾಸಕಿ ನಿಂಬಾಳ್ಕರ್, ಎದುರಾಳಿಗಳಿಗೆ ಹೆಬ್ಬೆರಳು ಮೇಲೆ ಮಾಡಿ ಶುಭಾಶಯ ಸೂಚಿಸುವ ಮೂಲಕ ಸ್ಪರ್ಧಾ ಮನೋಭಾವ ಮೆರೆದರು.

ಮತದಾನದ ಬಳಿಕ ಗೆಲುವೇ ಅದಲು-ಬದಲು!

ತೀವ್ರ ಕುತೂಹಲದ ಕೆರಳಿಸಿದ್ದ ಖಾನಾಪುರ ಕ್ಷೇತ್ರದಲ್ಲಿ ರೆಸಾರ್ಟ್ ರಾಜಕಾರಣವೂ ತಿರುವು-ಮುರುವಾಯಿತು. ರೆಸಾರ್ಟ್‌ನಿಂದ 28 ಮತದಾರರ ಸಮೇತ ನೇರವಾಗಿ ಮತದಾನದ ಕೇಂದ್ರಕ್ಕೆ ಬಿಂದಿಳಿದಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್, ಕೇವಲ 25 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದರು. ಬಿಜೆಪಿಯ ಬೆಂಬಲ ಹೊಂದಿದ್ದ ಪ್ರತಿಸ್ಪರ್ಧಿ ಅರವಿಂದ ಪಾಟೀಲ ಕೇವಲ 23 ಮತದಾರರೊಂದಿಗೆ ರೆಸಾರ್ಟ್‌ನಿಂದ ಮತದಾನ ಕೇಂದ್ರಕ್ಕೆ ಬಂದರೂ ಒಟ್ಟು 27 ಮತ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದರು. ಇಬ್ಬರು ಮತದಾರರು ನ್ಯಾಯಾಲಯದಿಂದ ಅನುಮತಿ ಪಡೆದು ಹಕ್ಕು ಚಲಾಯಿಸಿದ್ದರು. ಕಾಕತಾಳೀಯ ಎಂಬಂತೆ ಅಷ್ಟೇ ಮತಗಳ ಅಂತರದಿಂದ ಗೆಲುವಿನ ಫಲಿತಾಂಶ ಘೋಷಣೆಯಾಯಿತು.

ಮತದಾನದ ಸುತ್ತ ಮುಖಂಡರ ಪ್ರಹಸನ

ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಮತದಾನ ಶುರುವಾಗುತ್ತಿದ್ದಂತೆ ಡಿಸಿಎಂ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಬಿ.ಕೆ.ಮಾಡೆಲ್ ಶಾಲೆ ಎದುರಿನ ಐನಾಕ್ಸ್ ಸಿನಿಮಾ ಮಂದಿರದ ಆವರಣದಲ್ಲಿಯೇ ಇದ್ದು, ಮತದಾನದ ಮೇಲೆ ಗಮನ ಹರಿಸಿದರು. ಆಗಾಗ ಖಾನಾಪುರ ಕ್ಷೇತ್ರದ ಅಭ್ಯರ್ಥಿ ಅರವಿಂದ ಪಾಟೀಲ ಜತೆ ಚರ್ಚಿಸಿದ ಮುಖಂಡರು, ತಮ್ಮ ಬೆಂಬಲಿಗರನ್ನು ದೂರವಾಣಿ ಮೂಲಕವೇ ಸಂಪರ್ಕಿಸಿ ಸಮಾಲೋಚನೆ ಮಾಡುತ್ತಿರುವುದು ಕಂಡುಬಂತು.

ಅನುಮತಿ ಪಡೆದು ಮತದಾನ

ಮಧ್ಯಾಹ್ನದ ಹೊತ್ತಿಗೆ ಖಾನಾಪುರ ಕ್ಷೇತ್ರದ 50 ಮತಗಳ ಪೈಕಿ 48 ಮತಗಳು ಚಲಾವಣೆಯಾಗಿದ್ದವು. ತಮ್ಮೆಲ್ಲ ಬೆಂಬಲಿಗರ ಮತದಾನದ ನಂತರ ಶಾಸಕಿ ಅಂಜಲಿ ನಿಂಬಾಳ್ಕರ್ ಮತಚಲಾಯಿಸಿದರು. ಉಳಿದಂತೆ ಇಬ್ಬರು ಮತದಾರರು ನ್ಯಾಯಾಲಯದಿಂದ ಆದೇಶ ಪಡೆದು ಮತದಾನ ಮಾಡುವುದು ತಡವಾಯಿತು. ಅದಕ್ಕೂ ಮುನ್ನ ನಡೆದ ನಾಯಕರ ಭೇಟಿ, ಪ್ರಮುಖ ಮಹತ್ವ ಪಡೆದುಕೊಂಡಿತು.

ಮುಖಂಡರ ಗುಪ್ತ ಸಭೆ

ಖಾನಾಪುರ ಕ್ಷೇತ್ರದ 50 ಮತಗಳ ಪೈಕಿ ಶೇ.90ಕ್ಕೂ ಅಧಿಕ ಮತದಾನವಾದ ನಂತರ ನಗರದ ಪ್ರವಾಸಿ ಮಂದಿರಕ್ಕೆ ಶಿಫ್ಟ್ ಆದ ಮುಖಂಡರು ಗುಪ್ತ ಸಭೆ ನಡೆಸಿದರು. ಅಲ್ಲಿ ಮುಂದಿನ ಬೆಳವಣಿಗೆ ಹಾಗೂ ಅಭ್ಯರ್ಥಿಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡರು ಎನ್ನಲಾಗಿದೆ. ಈ ಅವಧಿಯಲ್ಲಿಯೇ ಪ್ರವಾಸಿ ಮಂದಿರದಲ್ಲಿದ್ದ ಅರವಿಂದ ಪಾಟೀಲ ಅವರು ಪ್ರತಿಸ್ಪರ್ಧಿ ಡಾ.ಅಂಜಲಿ ನಿಂಬಾಳ್ಕರ್ ಬರುತ್ತಿದ್ದಂತೆಯೇ ಮತ್ತೆ ಐನಾಕ್ಸ್ ಚಿತ್ರಮಂದಿರದತ್ತ ಹೊರಟರು.

ಹೋಟೆಲ್‌ನಲ್ಲಿ ಸತೀಶ ಜಾರಕಿಹೊಳಿ ವ್ಯೆಹ

ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಕುಳಿತು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೆರೆಮರೆಯಲ್ಲಿಯೇ ಪಯತ್ನ ನಡೆಸಿದ್ದರು. ಚುನಾವಣೆ ನಡೆದ ಮೂರು ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ಮಾತ್ರ ಕೈ ಪಡೆಗೆ ಪ್ರತಿಷ್ಠೆಯ ಪಶ್ನೆಯಾಗಿತ್ತು. ಪಕ್ಷದ ಮಹಿಳಾ ವಕ್ತಾರೆಯೇ ಇಲ್ಲಿ ಖುದ್ದು ಸ್ಪರ್ಧೆಯಲ್ಲಿದ್ದರು. ಹೀಗಾಗಿ ಅವಿರೋಧ ಆಯ್ಕೆಗೂ ನಡೆಸಿರದಷ್ಟು ಕಸರತ್ತನ್ನು ಬಿಜೆಪಿ ಈ ಕ್ಷೇತ್ರದಲ್ಲಿ ಮಾಡುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net